ಬಸ್-ಲಾರಿ ಮುಖಾಮುಖಿ ಡಿಕ್ಕಿ: 9 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಸಿದ್ದಾಪುರ: ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 9 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು(ಮೇ 4) ನಸುಕಿನ ಜಾವ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕು ಸಿದ್ದಾಪುರ ಹೊರವಲಯದ ಗುಂಡೂರು ಕ್ರಾಸ್ ಬಳಿ ನಡೆದಿದೆ.

ಬೆಂಗಳೂರಿಂದ ದೇವದುರ್ಗಕ್ಕೆ ಹೊರಟಿದ್ದ ಸ್ಲೀಪರ್ ಕೋಚ್ ಬಸ್ ಹಾಗೂ ತೆಲಂಗಾಣದಿಂದ ಹುಬ್ಬಳ್ಳಿಗೆ ಹೊರಟಿದ್ದ ಸ್ಟೀಲ್ ಪೈಪ್ ತುಂಬಿಕೊಂಡಿದ್ದ ಲಾರಿ ಸಿದ್ದಾಪುರ ಮಾರ್ಗವಾಗಿ ಹೊರಟಿದ್ದ ವೇಳೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗ ಹಾಗೂ ಲಾರಿಯ ಮುಂಬಾಗ ಸಂಪೂರ್ಣ ಜಖಂಗೊಂಡಿದೆ. ಬಸ್ಸಿನ ಚಾಲಕ ಸೇರಿದಂತೆ ಬಸ್ಸಿನಲ್ಲಿದ್ದ 9 ಮಂದಿ ಗಾಯಗೊಂಡಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದು, ಬಸ್ಸಿನೊಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆಯಲು ನೆರವಾದರು. ಗಾಯಾಳುಗಳನ್ನು ಕೂಡಲೇ ಗಂಗಾವತಿ, ಸಿಂಧನೂರು, ರಾಯಚೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ವಿಷಯ ತಿಳಿದ ಗಂಗಾವತಿ ಡಿವೈ ಎಸ್ಪಿ ಹಾಗೂ ಕಾರಟಗಿ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ರೇನ್ ಮೂಲಕ ವಾಹನಗಳನ್ನು ಪಕ್ಕಕ್ಕೆ ಸರಿಸಿ ವಾಹನ ಸಂಚಾರ ಸುಗಮಗೊಳಿಸುವ ಕೆಲಸ ಮಾಡಿದರು.

ಲಾರಿ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

error: Content is protected !!