
ಚಿಕನ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಮಳೆಗಾಲ, ಚಳಿಗಾಲ ಅಷ್ಟೇ ಏಕೆ ಸುಡುವ ಬೇಸಿಗೆಯಲ್ಲೂ ಚಿಕನ್ ಖಾದ್ಯ ಊಟಕ್ಕೆ ಬೇಕೇ ಬೇಕು. ಇಂಥ ಒಂದು ಸ್ವಾದಿಷ್ಟವಾದ ಖಾದ್ಯವೇ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಚೆಟ್ಟಿನಾಡ್ ಚಿಕನ್. ಇದು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಖಾದ್ಯವಾಗಿದೆ. ದಕ್ಷಿಣ ಭಾರತದಾದ್ಯಂತ ಜನಪ್ರಿಯವಾಗಿರುವ ಈ ಖಾದ್ಯವನ್ನು ಅನ್ನ, ರೊಟ್ಟಿ, ನಾನ್, ಚಪಾತಿ ಅಥವಾ ಪರೋಟಗಳೊಂದಿಗೆ ಸವಿಯಲು ಅತ್ಯುತ್ತಮ. ಈ ಸಂಡೆ ನೀವೂ ಮನೆಯಲ್ಲಿ ಚೆಟ್ಟಿನಾಡ್ ಚಿಕನ್ ಮಾಡಿ ರುಚಿ ನೋಡಿ.
ಚೆಟ್ಟಿನಾಡ್ ಚಿಕನ್ ಮಾಡಲು ಬೇಕಾಗುವ ಸಾಮಗ್ರಿಗಳು: ಧನಿಯಾ – 1 ಚಮಚ, ಮೆಂತ್ಯ – 2 ಚಮಚ, ಕಾಳುಮೆಣಸು – 1 ಚಮಚ, ಚಕ್ಕೆ – 1 ಇಂಚು, ಒಣ ಮೆಣಸಿನಕಾಯಿ – 3, ಕಾಶ್ಮೀರಿ ಕೆಂಪು ಮೆಣಸಿನಕಾಯಿ – 2, ಸ್ಟಾರ್ (ನಕ್ಷತ್ರ) – 1, ಜೀರಿಗೆ – 1 ಚಮಚ, ಏಲಕ್ಕಿ – 2, ಲವಂಗ – 6, ತೆಂಗಿನಕಾಯಿ – 2 ಚಮಚ, ಶುಂಠಿ -ಸ್ವಲ್ಪ, ಬೆಳ್ಳುಳ್ಳಿ – 7-8 ಎಸಳು, ಉಪ್ಪು – ರುಚಿಗೆ ತಕ್ಕಷ್ಟು, ಚಿಕನ್ – 500 ಗ್ರಾಂ, ಮೊಸರು – 1 ½ ಚಮಚ, ನಿಂಬೆ ರಸ – 1 ಚಮಚ, ತುಪ್ಪ – 2 ಚಮಚ, ಈರುಳ್ಳಿ 1, ಅರಿಶಿನ ಪುಡಿ – ½ ಚಮಚ, ಕರಿಬೇವು-ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ: ಚಿಕನ್ ಅನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಮಸಾಲಾ ತಯಾರಿಸಲು, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹೊರತುಪಡಿಸಿ ಧನಿಯಾ, ಮೆಂತ್ಯ, ಸ್ಟಾರ್, ಒಣ ಮೆಣಸಿನಕಾಯಿ, ಕಾಶ್ಮೀರಿ ಮೆಣಸಿನಕಾಯಿ, ಏಲಕ್ಕಿ, ತೆಂಗಿನಕಾಯಿ ಚೂರು ಸೇರಿದಂತೆ ಉಳಿದ ಪದಾರ್ಥಗಳನ್ನು ಹುರಿದುಕೊಳ್ಳಿ. ಹುರಿದ ಮಸಾಲೆ ಪದಾರ್ಥಗಳೊಂದಿಗೆ ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ತೆಂಗಿನಕಾಯಿ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಚಿಕನ್‌ಗೆ ಹಾಕಿ, ನಿಂಬೆ ರಸ, ಮೊಸರು ಸೇರಿಸಿ 1 ಗಂಟೆ ಮ್ಯಾರಿನೇಟ್ ಮಾಡಿ. ನಂತರ ಗ್ಯಾಸ್ ಆನ್ ಮಾಡಿ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಅರಿಶಿನ ಪುಡಿ ಸೇರಿಸಿ ಹುರಿಯಿರಿ. ಹುರಿದ ಈರುಳ್ಳಿಗೆ ಈಗ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ ಚೆನ್ನಾಗಿ ತಿರುಗಿಸಿ. ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಚೆಟ್ಟಿನಾಡ್ ಮಸಾಲೆ ಚಿಕನ್‌ನೊಂದಿಗೆ ಪೂರ್ತಿಯಾಗಿ ಬೇಯುವವರೆಗೆ ಲೋ ಫ್ಲೇಮ್ ನಲ್ಲಿ ಮುಚ್ಚಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಈಗ ರುಚಿಕರವಾದ ಚೆಟ್ಟಿನಾಡ್ ಚಿಕನ್ ಸವಿಯಲು ಸಿದ್ಧ.
