ಮೇ 1ರಂದು ಅದ್ಧೂರಿ ಕಾರ್ಮಿಕ ದಿನಾಚರಣೆ; 450 ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ತು ಹಾಗೂ ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕ-ಮಾಲಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಇದೇ ಬರುವ ಮೇ 1ರಂದು ಬೆಳಿಗ್ಗೆ 10:30ಕ್ಕೆ ನಗರದ ತಾಜ್ ಮಹಲ್ ಆಟೋ ಪಾರ್ಕ್‌ನಲ್ಲಿ ಅದ್ದೂರಿ ‘ಕಾರ್ಮಿಕ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದ ಬೆನ್ನೆಲುಬಾಗಿರುವ ಕಾರ್ಮಿಕರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಬಾರಿಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಐವರು ನುರಿತ ಕಾರ್ಮಿಕರನ್ನು ಸನ್ಮಾನಿಸಲಾಗುವುದು. ಆಟೋ ಚಾಲಕರಾದ ರಾಜೇಶ್ ವೀರನಗರ ಮತ್ತು ಇಸ್ಮಾಯಿಲ್, ಬಸ್ ಚಾಲಕರಾದ ಅಪ್ಪುಸ್ವಾಮಿ ಮತ್ತು ದಯಾನಂದ ಶೆಟ್ಟಿ ಹಾಗೂ ಟೆಂಪೋ ಚಾಲಕ ಮ್ಯಾಕ್ಸಿ ಮಿರಾಂದ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಅಸಂಘಟಿತ ಕಾರ್ಮಿಕರಿಗಾಗಿ ಈಗಾಗಲೇ ಶಾಸಕರ ಕಚೇರಿಯಿಂದ ನೊಂದಾವಣಿ ಪ್ರಕ್ರಿಯೆ ನಡೆಸಲಾಗಿದ್ದು, ಹೋಟೆಲ್ ಕಾರ್ಮಿಕರು, ರಿಕ್ಷಾ ಚಾಲಕರು ಸೇರಿದಂತೆ ಸುಮಾರು 450 ಜನರಿಗೆ ಅಂದು ‘ಸ್ಮಾರ್ಟ್ ಕಾರ್ಡ್’ ವಿತರಿಸಲಾಗುವುದು. ಈ ಕಾರ್ಡ್ ಮೂಲಕ ಕಾರ್ಮಿಕರಿಗೆ 5 ಲಕ್ಷದವರೆಗೆ ವಿಮೆ ಹಾಗೂ ಇತರೆ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ. ಕಾರ್ಮಿಕ ಅಧಿಕಾರಿ ವಿಲ್ಮಾ ತೌರೋ ಅವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಖಾಸಗಿ ಬಸ್ ನೌಕರರು, ಹೋಟೆಲ್ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಕೆಲಸದ ಭದ್ರತೆ ಇಲ್ಲದಂತಾಗಿದೆ. ಇವರೆಲ್ಲರಿಗೂ ಕಡ್ಡಾಯವಾಗಿ ಪಿಎಫ್ (PF) ಮತ್ತು ಈಎಸ್ಐ (ESI) ಸೌಲಭ್ಯಗಳನ್ನು ಒದಗಿಸಬೇಕು” ಎಂದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳನ್ನು ಐವನ್ ಡಿಸೋಜಾ ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಡಿಸಿಪಿ ಕೆ. ರವಿಶಂಕರ್ ಅವರು ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

error: Content is protected !!