
ಚಿತ್ರದುರ್ಗ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಬಸ್ಸಿನಲ್ಲಿದ್ದ 44 ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು(ಏ.28) ಬೆಳಗ್ಗೆ ನಡೆದಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ಸರ್ಕಾರಿ ಬಸ್, ಹೆಗ್ಗೆರೆ ಗ್ರಾಮದ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಪಲ್ಟಿಯಾಗಿದೆ.

ಬಸ್ಸಿನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಬಸ್ ಪಲ್ಟಿಯಾದ ರಭಸಕ್ಕೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಗಾಯಾಳುಗಳು ಚೇತರಿಸಿಕೊಂಡು ತಮ್ಮ ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಚಳ್ಳಕೆರೆ ಪೊಲೀಸರು, ಕ್ರೇನ್ ಸಹಾಯದಿಂದ ರಸ್ತೆ ಮಧ್ಯೆ ಬಿದ್ದಿದ್ದ ಬಸ್ಸನ್ನು ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.