ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (DKMUL) 2025-26ನೇ ಸಾಲಿನಲ್ಲಿ 1,270 ಕೋಟಿ ರೂಪಾಯಿಗಳ ಬೃಹತ್ ವಹಿವಾಟು ನಡೆಸುವ ಮೂಲಕ ಶೇ. 8.18ರಷ್ಟು ಅಭಿವೃದ್ಧಿ ದಾಖಲಿಸಿದೆ. ಒಕ್ಕೂಟದ ಪ್ರಗತಿ ಹಾಗೂ ಹೈನುಗಾರರಿಗಾಗಿ ಹಮ್ಮಿಕೊಂಡಿರುವ ನೂತನ ಯೋಜನೆಗಳ ಕುರಿತು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗಡೆ ಅವರು ಸೋಮವಾರ ಮಂಗಳೂರಿನ ಒಕ್ಕೂಟದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಹೈನುಗಾರಿಕೆಯಲ್ಲಿ ಗುಣಮಟ್ಟದ ತಳಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಒಕ್ಕೂಟವು ಮಹತ್ವದ ‘ಕಡಸು ಅಭಿವೃದ್ಧಿ ಯೋಜನೆ’ಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ ಆಯ್ಕೆಯಾದ ಹೈನುಗಾರರಿಗೆ ಪ್ರತಿ ಕಡಸು ಸಾಕಾಣಿಕೆಗಾಗಿ ಮಾಸಿಕ 1,000 ರೂಪಾಯಿಯಂತೆ ವಾರ್ಷಿಕ 12,000 ರೂಪಾಯಿಗಳ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. 2026-27ನೇ ಸಾಲಿನಲ್ಲಿ ಈ ಯೋಜನೆಗಾಗಿ ಒಕ್ಕೂಟವು 60 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದು, ರೈತರ ಆರ್ಥಿಕ ಸಬಲೀಕರಣಕ್ಕೆ ಇದು ಸಹಕಾರಿಯಾಗಲಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಹಾಲಿನ ಸಂಗ್ರಹಣೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ದಿನವೊಂದಕ್ಕೆ ಸರಾಸರಿ 4.07 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 19ರಷ್ಟು ಪ್ರಗತಿಯಾಗಿದೆ. ಮಾರುಕಟ್ಟೆಯಲ್ಲಿ ದಿನಕ್ಕೆ 3.87 ಲಕ್ಷ ಲೀಟರ್ ಹಾಲು ಹಾಗೂ 81,979 ಕೆ.ಜಿ ಮೊಸರು ಮಾರಾಟವಾಗುತ್ತಿದ್ದು, ದೈನಂದಿನ ವಹಿವಾಟು 3.03 ಕೋಟಿ ರೂಪಾಯಿಗಳನ್ನು ದಾಟಿದೆ. ಒಕ್ಕೂಟವು ಈ ಬಾರಿ 10.61 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ ಎಂದು ರವಿರಾಜ್ ಹೆಗ್ಡೆ ವಿವರಿಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಒಕ್ಕೂಟವು ತನ್ನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೂತನ ಐಸ್‌ಕ್ರೀಮ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದಕ್ಕಾಗಿ 12.81 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಮಂಗಳೂರಿನಲ್ಲಿ 7 ಕೋಟಿ ರೂ. ವೆಚ್ಚದ ಗೋಡೌನ್ ಹಾಗೂ ಉಡುಪಿಯಲ್ಲಿ 4.25 ಕೋಟಿ ರೂ. ವೆಚ್ಚದ ಆಡಳಿತ ಕಚೇರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ಮೆಗಾ ಡೈರಿ, ಪನೀರ್ ಘಟಕ ಹಾಗೂ ನೀರು ಬಾಟ್ಲಿಂಗ್ ಪ್ಲಾಂಟ್ ಸ್ಥಾಪಿಸುವ ಗುರಿಯನ್ನು ಒಕ್ಕೂಟ ಹೊಂದಿದೆ ಎಂದು ಅವರು ಪ್ರಕಟಿಸಿದರು.

ಪ್ಲಾಸ್ಟಿಕ್ ಕವರ್ ಬಳಕೆ ಅನಿವಾರ್ಯ:
ಹಾಲಿನ ಪ್ಯಾಕಿಂಗ್ ಕುರಿತು ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕರಾದ ರವಿರಾಜ್ ಉಡುಪ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಾಲನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. “ಮಣ್ಣಿನ ಬಾಟಲಿಯಲ್ಲಿ ಹಾಲು ಮಾರಾಟ ಮಾಡಿದರೆ ಪ್ರತಿ ಬಾಟಲಿಗೆ ಕನಿಷ್ಠ 13 ರೂಪಾಯಿ ಹೆಚ್ಚುವರಿ ಅಸಲು ವೆಚ್ಚ ತಗಲುತ್ತದೆ. ಗ್ರಾಹಕರು ಈ ಹೆಚ್ಚಿನ ದರ ನೀಡಲು ಸಿದ್ಧರಿರುವುದಿಲ್ಲ. ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧವಾದರೆ ಮಾತ್ರ ನಾವು ಪರ್ಯಾಯ ವ್ಯವಸ್ಥೆ ಮಾಡಬಹುದು. ಬಳಸಿದ ಕವರ್‌ಗಳನ್ನು ಕಸ ವಿಂಗಡನೆಯವರಿಗೆ ನೀಡಿದರೆ ಪರಿಸರ ಮಾಲಿನ್ಯ ತಡೆಯಬಹುದು,” ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಸುಚರಿತ ಶೆಟ್ಟಿ, ಚಂದ್ರಶೇಖರ, ಮಮತಾ ಶೆಟ್ಟಿ, ವಿವೇಕ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.