
ಮಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹಸಚಿವ ಪ್ರಿಯಾಂಕ್ ಖರ್ಗೆ ಒಬ್ಬ ಮೋಸ್ಟ್ ಇನ್ ಸೆನ್ಸಿಟಿವ್ ಮಿನಿಸ್ಟರ್. ಅವರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ಮಾತೆತ್ತಿದರೆ ಆರೆಸ್ಸೆಸ್ ಆರೆಸ್ಸೆಸ್ ಎಂದು ಜಪ ಮಾಡುವ ಖರ್ಗೆ ಅವರು ಪ್ರಶ್ನೆ ಪತ್ರಿಕೆ ಲೀಕ್ ಕುರಿತು ಪ್ರಶ್ನೆ ಮಾಡಿದರೆ ಪ್ರತಿಭಟನೆ ಮಾಡಿ ನಾವು ಲಾಠಿಚಾರ್ಜ್ ಮಾಡುತ್ತೇವೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಇದರಿಂದ ರಾಜ್ಯದ ಮಕ್ಕಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ“ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ. ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಕಿಡಿಕಾರಿದರು.
”ಸರಕಾರದ ಅವಧಿಯಲ್ಲಿ ಎರಡು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು ನಂತರ ಪರೀಕ್ಷೆಗಳು ನಡೆದವು. ಈ ಪ್ರಕರಣದಲ್ಲಿ ಸುಮಾರು 40 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆದರೆ ಇತ್ತೀಚಿನವರೆಗೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೂ, ಒಬ್ಬರಿಗೂ ಶಿಕ್ಷೆಯಾಗಿಲ್ಲ. ಅಷ್ಟೊಂದು ಜನರ ವಿರುದ್ಧ ಚಾರ್ಜ್‌ಶೀಟ್ ಇದ್ದರೂ ಪ್ರಕರಣ ದುರ್ಬಲವಾಗುವಂತೆ ಮಾಡಲಾಗಿದೆ.
ಇದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಘಟನೆ. ಪ್ರಕರಣವನ್ನು ಇಷ್ಟು ದುರ್ಬಲಗೊಳಿಸಿರುವುದಕ್ಕೆ ಕಾರಣವೇನು? ಇದರಿಂದ ಭ್ರಷ್ಟಾಚಾರದಲ್ಲಿ ಹಲವರು ಭಾಗಿಯಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ“ ಎಂದರು.

”ಯುವಕರ ಭವಿಷ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯ ಸಿಗದಿದ್ದರೆ, ಜನರಿಗೆ ನ್ಯಾಯದ ಮೇಲೆ ನಂಬಿಕೆ ಉಳಿಯುವುದಿಲ್ಲ. ಕರ್ನಾಟಕ ಸರ್ಕಾರ ಈ ರೀತಿಯ ಪ್ರಕರಣಗಳನ್ನು ತಡೆಯಲು ಯಾವ ಬದಲಾವಣೆಗಳನ್ನು ತಂದಿದೆ? ಯಾವ ರೀತಿಯ ಶಿಕ್ಷೆ, ದಂಡ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ವ್ಯವಸ್ಥೆ, ಪ್ರಶ್ನೆಪತ್ರಿಕೆ ಆಯ್ಕೆ ಮತ್ತು ಭದ್ರತೆಯಲ್ಲಿ ಯಾವ ಸುಧಾರಣೆಗಳನ್ನು ಮಾಡಿದೆ? ತಂತ್ರಜ್ಞಾನವನ್ನು ಹೇಗೆ ಬಳಸುತ್ತಿದೆ? ಇಂತಹ ಸುಧಾರಣೆಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು“ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ರಣದೀಪ್ ಕಾಂಚನ್, ಆಶ್ರಿತ್ ನೋಂಡಾ, ಜೀವನ್ ಕುಮಾರ್ ತೊಕ್ಕೊಟ್ಟು ಮತ್ತಿತರರು ಉಪಸ್ಥಿತರಿದ್ದರು.