ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ: ನೇರ ಉದ್ಯೋಗಾವಕಾಶ- ಕೆಪಿಟಿಗೆ ಬನ್ನಿ, ವೃತ್ತಿಜೀವನ ರೂಪಿಸಿಕೊಳ್ಳಿ!

ಮಂಗಳೂರು: ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ 75 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ (KPT), ಭಾರತದ ಪ್ರಥಮ ಸ್ವಾಯತ್ತ (Autonomous) ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2026-27ನೇ ಸಾಲಿನ ಡಿಪ್ಲೋಮಾ ಇಂಜಿನಿಯರಿಂಗ್ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಹರೀಶ್ ಶೆಟ್ಟಿ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಐಸಿಟಿಇ (AICTE) ನಿಂದ ಮಾನ್ಯತೆ ಪಡೆದಿರುವ ನಮ್ಮ ಸಂಸ್ಥೆಯು ಸ್ವಾಯತ್ತ ಸ್ಥಾನಮಾನ ಹೊಂದಿರುವುದರಿಂದ, ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ಪ್ರತಿ 2-3 ವರ್ಷಗಳಿಗೊಮ್ಮೆ ಪಠ್ಯಕ್ರಮವನ್ನು ನವೀಕರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಎಐ (AI), ಐಒಟಿ (IoT), 3D ಪ್ರಿಂಟಿಂಗ್‌, ಪಾಲಿಮರ್ ಟೆಕ್ನಾಲಜಿಯಂತಹ ಆಧುನಿಕ ತಂತ್ರಜ್ಞಾನಗಳನ್ನು ಕಲಿಯಲು ಸಾಧ್ಯವಾಗುತ್ತಿದೆ. ಅಲ್ಲದೆ, ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯು ಅತ್ಯಂತ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆ” ಎಂದು ಅವರು ವಿವರಿಸಿದರು.

ನೇರ ಉದ್ಯೋಗಾವಕಾಶ
ಹತ್ತನೇ ತರಗತಿಯ ನಂತರ ನೇರವಾಗಿ 3 ವರ್ಷಗಳ ಡಿಪ್ಲೋಮಾ ಕೋರ್ಸ್‌ಗೆ ಸೇರುವುದರಿಂದ ವಿದ್ಯಾರ್ಥಿಗಳು ಬೇಗನೆ ವೃತ್ತಿ ಜೀವನ ಆರಂಭಿಸಬಹುದು. “ನಮ್ಮಲ್ಲಿ ವಾರ್ಷಿಕವಾಗಿ 60ಕ್ಕೂ ಹೆಚ್ಚು ಕಂಪೆನಿಗಳು ಕ್ಯಾಂಪಸ್ ಸಂದರ್ಶನಕ್ಕೆ ಬರುತ್ತಿದ್ದು, ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯುತ್ತಿದ್ದಾರೆ. ಡಿಪ್ಲೋಮಾ ಮುಗಿಸಿದ ನಂತರ ಇಂಜಿನಿಯರಿಂಗ್ ಪದವಿಯ (B.E/B.Tech) ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯುವ ʻಲ್ಯಾಟರಲ್ ಎಂಟ್ರಿ’ ಸೌಲಭ್ಯವೂ ಇದೆ. ಇದು ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ” ಎಂದು ಪ್ರಾಂಶುಪಾಲರು ತಿಳಿಸಿದರು.

ಅತೀ ಕಡಿಮೆ ಶುಲ್ಕ
ಖಾಸಗಿ ಪಾಲಿಟೆಕ್ನಿಕ್‌ಗಳಲ್ಲಿ 50 ಸಾವಿರದಿಂದ 1 ಲಕ್ಷದವರೆಗೆ ಶುಲ್ಕವಿದ್ದರೆ, ಕೆಪಿಟಿಯಲ್ಲಿ ಸರ್ಕಾರಿ ದರದಂತೆ ಅತ್ಯಂತ ಕಡಿಮೆ ಶುಲ್ಕ ವಿಧಿಸಲಾಗುತ್ತಿದೆ. “ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 4,830 ರೂ. ಶುಲ್ಕವಿದ್ದರೆ, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಕೇವಲ 580((ಆದಾಯ 2.5 ಲಕ್ಷದೊಳಗೆ) ರೂ. ನಿಗದಿಪಡಿಸಲಾಗಿದೆ. ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಪ್ರವರ್ಗ-1: 1,065 ರೂ. SNQ ಕೋಟಾ: 1,580 ರೂ. ಇರಲಿದ್ದು, ಇದು ತಾಂತ್ರಿಕ ಶಿಕ್ಷಣ ಪಡೆಯಲು ಇರುವ ಸುವರ್ಣಾವಕಾಶ” ಎಂದರು.

ಇಂಜಿನಿಯರಿಂಗ್ ಪದವಿಗೆ ನೇರ ಪ್ರವೇಶ:
ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳು DCET ಪರೀಕ್ಷೆಯ ಮೂಲಕ ಇಂಜಿನಿಯರಿಂಗ್ ಪದವಿಯ (B.E/B.Tech) ಎರಡನೇ ವರ್ಷಕ್ಕೆ ನೇರ ಪ್ರವೇಶ ಪಡೆಯಬಹುದು. ಇಲ್ಲಿ ಯಾವುದೇ ವಿಭಾಗದಲ್ಲಿ (ಉದಾಹರಣೆಗೆ ಮೆಕ್ಯಾನಿಕಲ್ ಓದಿದವರು ಕಂಪ್ಯೂಟರ್ ಸೈನ್ಸ್‌ಗೆ) ಬದಲಾವಣೆ ಮಾಡಿಕೊಳ್ಳುವ ಅವಕಾಶವೂ ಇದೆ. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುವುದಲ್ಲದೆ, ಪದವಿಗಿಂತ ಮೊದಲೇ ಉದ್ಯೋಗದ ಆಯ್ಕೆಯೂ ಕೈಯಲ್ಲಿರುತ್ತದೆ.

ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಇಂದು ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಿರ್ದೇಶಕರಾಗಿ, ಸರ್ಕಾರಿ ಇಲಾಖೆಗಳಲ್ಲಿ ಉನ್ನತ ಅಧಿಕಾರಿಗಳಾಗಿ ಮತ್ತು ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖ ವಿಭಾಗೀಯ ಮುಖ್ಯಸ್ಥರಾಗಿರುವ ಸತೀಶ್, ಹರೀಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!