ಬ್ರಹ್ಮಕಲಶದ ನಡುವೆ ಧರ್ಮನೇಮ: ಪುಚ್ಚೆ ಮೊಗರುವಿನ ಅನಾಹುತದ ಹಿಂದೆ ಅಡಗಿದೆಯೇ ನಿಗೂಢ ದೈವಿಕ ಸಂಕಲ್ಪ?

ಮೂಡಬಿದ್ರೆ: ತುಳುನಾಡಿನ ಆಚರಣೆಗಳಲ್ಲಿ ಭಕ್ತಿ ಮತ್ತು ಭಯಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಇಲ್ಲಿನ ಸಂಪ್ರದಾಯದ ಕಟ್ಟುಪಾಡುಗಳಿಗೂ ಇದೆ. ಇತ್ತೀಚೆಗೆ ಪುಚ್ಚೆ ಮೊಗರು ಬಾವದಬೈಲು ಪ್ರದೇಶದಲ್ಲಿ ಸಂಭವಿಸಿದ ಅನಿರೀಕ್ಷಿತ ಅವಘಡವು ಈಗ ಇಡೀ ಮಾಗಣೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.


ಮೂಡಬಿದ್ರೆ ಸಮೀಪದ ತಾಕೋಡೆ ಬರ್ಕೆ ಧರ್ಮನೇಮದ ಭಂಡಾರ ಮೆರವಣಿಗೆಯ ಪಲ್ಲಕ್ಕಿ ಸಾಗುತ್ತಿದ್ದಾಗ ಹಳೆಯ ಕಾಲು ಸಂಕವು ಏಕಾಏಕಿ ಕುಸಿದು ಬಿದ್ದಿರುವುದು, ಪಲ್ಲಕ್ಕಿ ಹೊತ್ತವರು ಸೇರಿದಂತೆ ಭಕ್ತರು ಹತ್ತಾರು ಅಡಿ ಕೆಳಕ್ಕೆ ಬಿದ್ದರೂ, ಯಾರಿಗೂ ಪ್ರಾಣಾಪಾಯ ಸಂಭವಿಸದಿರುವುದು ಒಂದು ಕಡೆಯಾದರೆ, ಈ ಅನಾಹುತದ ಹಿಂದೆ ದೈವಿಕ ಸಂಕಲ್ಪವಿದೆಯೇ ಎಂಬ ಚರ್ಚೆ ಈಗ ಜೋರಾಗಿದೆ.

ಸಂಪ್ರದಾಯದ ಲೋಪವಾಯಿತೇ?
ಈ ಘಟನೆಯ ಬೆನ್ನಲ್ಲೇ ಒಂದು ಪ್ರಮುಖ ಪ್ರಶ್ನೆ ಈಗ ಊರವರನ್ನು ಕಾಡುತ್ತಿದೆ. “ಮಾರೂರು ದೇವಸ್ಥಾನದಲ್ಲಿ ಬ್ರಹ್ಮಕಲಶಕ್ಕೆ ದಿನ ನಿಗದಿಯಾಗಿ, ಚಪ್ಪರ ಮುಹೂರ್ತವೂ ಮುಗಿದ ಮೇಲೆ ಅದೇ ಮಾಗಣೆಯ ವ್ಯಾಪ್ತಿಯಲ್ಲಿ ಧರ್ಮನೇಮ ಮಾಡಿದ್ದು ಸರಿಯೇ?” ಎಂಬ ಜಿಜ್ಞಾಸೆ ಶುರುವಾಗಿದೆ. ಸಾಮಾನ್ಯವಾಗಿ ಮಾಗಣೆಯ ಮುಖ್ಯ ದೇವಸ್ಥಾನದ ಧಾರ್ಮಿಕ ವಿಧಿಗಳು ನಡೆಯುವಾಗ ಇಂತಹ ಇತರ ಕಾರ್ಯಕ್ರಮಗಳಿಗೆ ಕೆಲವು ನಿರ್ಬಂಧಗಳಿರುತ್ತವೆ. ಮುಖ್ಯ ದೇವರ ಧಾರ್ಮಿಕ ವಿಧಿಗಳು ಮುಗಿದ ಬಳಿಕವಷ್ಟೇ ಮಾಗಣೆಯ ಇತರ ದೈವ ದೇವರ ಕಾರ್ಯ ನಡೆಯುತ್ತದೆ. ವಿಶೇಷವೆಂದರೆ, ದೇವಸ್ಥಾನ ಮತ್ತು ಧರ್ಮನೇಮ ಎರಡಕ್ಕೂ ಒಂದೇ ಪುರೋಹಿತರು ದಿನ ನಿಗದಿ ಮಾಡಿದ್ದರು ಎಂಬ ಮಾತು ಕೇಳಿ ಬರುತ್ತಿದ್ದು, ದೈವದ ಕೆಲಸದಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಈ ದುರಂತದಲ್ಲಿ ದೈವದ ಅಪಾರ ಕಾರಣಿಕ ಗೋಚರಿಸಿದೆ ಎಂದು ಭಕ್ತರು ನಂಬಿದ್ದಾರೆ. ಸಂಕದ ಮೇಲಿದ್ದ ಭಾರೀ ಗಾತ್ರದ ಸಿಮೆಂಟ್ ಬೀಮ್‌ಗಳು ಮತ್ತು ಕಲ್ಲುಗಳು ಪಲ್ಲಕ್ಕಿ ಹೊತ್ತವರ ಮೈಮೇಲೆ ಬಿದ್ದಿದ್ದರೆ ಅಪಾಯವಾಗುವುದು ಖಚಿತವಾಗಿದ್ದವು. ಆದರೆ, ದೈವವು ತನ್ನ ಪವಿತ್ರ ಮೊಗಮೂರ್ತಿ ಮತ್ತು ಪರಿಕರಗಳನ್ನು ನೆಲಕ್ಕೆ ಒರಗಿಸಿ ತನಗೆ ನೋವು ಮಾಡಿಕೊಂಡಿತೇ ಹೊರತು, ತನ್ನನ್ನು ಹೊತ್ತ ಭಕ್ತರಿಗೆ ಯಾವುದೇ ಅಪಾಯವಾಗಲು ಬಿಡಲಿಲ್ಲ. ಅ ಸುನಿಲ್ ಶೆಟ್ಟಿ ಮುಕಾಲ್ದಿ ಅವರ ಕಾಲಿಗೆ ಪೆಟ್ಟಾಗಿದ್ದರೂ, ಅಂತಹ ಭೀಕರ ಪತನದಿಂದ ಸುರಕ್ಷಿತವಾಗಿ ಪಾರಾಗಿರುವುದು ದೈವದ ‘ಕೃಪೆ’ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಅಷ್ಟು ವರ್ಷಗಳಿಂದ ಸುಭದ್ರವಾಗಿದ್ದ ಆ ಸಿಮೆಂಟ್ ಸಂಕವು ಸರಿಯಾಗಿ ಪಲ್ಲಕ್ಕಿ ಮಧ್ಯಭಾಗಕ್ಕೆ ಬಂದಾಗಲೇ ಏಕೆ ಕುಸಿಯಿತು ಎಂಬುದು ಇಂದಿಗೂ ನಿಗೂಢವಾಗಿದೆ. ಅಚ್ಚರಿಯೆಂದರೆ, ಪಲ್ಲಕ್ಕಿಯ ಚೌಕಟ್ಟಿಗೆ ಯಾವುದೇ ಹಾನಿಯಾಗದೆ ಒಳಗಿದ್ದ ಮೊಗಮೂರ್ತಿಗೆ ಮಾತ್ರ ಕೊಂಚ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಪಲ್ಲಕ್ಕಿ ಹೊತ್ತವರು ಬಿದ್ದರೂ ಮೆರವಣಿಗೆಯ ಹತ್ತಿರದಲ್ಲೇ ಇದ್ದ ಇತರ ನೂರಾರು ಭಕ್ತರಿಗೆ ಒಂದು ಸಣ್ಣ ತರಚು ಗಾಯವೂ ಆಗದಿರುವುದು ದೈವದ ಪವಾಡ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಘಟನೆಯ ನಂತರ ಸ್ಥಳೀಯರು ತೋರಿದ ಸಮಯಪ್ರಜ್ಞೆ ಶ್ಲಾಘನೀಯವಾಗಿದ್ದರೂ, ಈ ಅನಾಹುತವು ಹುಟ್ಟುಹಾಕಿರುವ ದೈವಿಕ ಪ್ರಶ್ನೆಗಳು ಮಾತ್ರ ಹಸಿರಾಗಿಯೇ ಇವೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಹಿರಿಯರ ನಿರ್ಧಾರದತ್ತ ಎಲ್ಲರ ಚಿತ್ತ:
ಈ ಘಟನೆಯು ಕೇವಲ ತಾಂತ್ರಿಕ ವೈಫಲ್ಯವೋ ಅಥವಾ ಮಾಗಣೆಯ ಸಂಪ್ರದಾಯದಲ್ಲಿ ನಡೆದ ಲೋಪಕ್ಕೆ ದೈವವು ನೀಡಿದ ಎಚ್ಚರಿಕೆಯೋ ಎಂಬ ಬಗ್ಗೆ ಈಗ ಗಹನವಾದ ಚರ್ಚೆಗಳು ನಡೆಯುತ್ತಿವೆ. ಮಾಗಣೆಯ ಹಿರಿಯರು ಮತ್ತು ದೈವಜ್ಞರು ಈ ಬಗ್ಗೆ ಶೀಘ್ರದಲ್ಲೇ ದೈವದ ಮುಂದೆ ಪ್ರಶ್ನೆ ಇಟ್ಟು ಅಂತಿಮ ನಿರ್ಧಾರಕ್ಕೆ ಬರಬೇಕಿದೆ. ಅಲ್ಲಿಯವರೆಗೆ ಈ ಅವಘಡವು ತುಳುನಾಡಿನ ದೈವಶಕ್ತಿಯ ಕಾರ್ಣಿಕಕ್ಕೆ ಮತ್ತು ಭಕ್ತರ ಅಚಲ ನಂಬಿಕೆಗೆ ಒಂದು ಸಾಕ್ಷಿಯಾಗಿ ಉಳಿಯಲಿದೆ.

error: Content is protected !!