ಸುರತ್ಕಲ್: ಇಲ್ಲಿನ ಶ್ರೀಕ್ಷೇತ್ರ ಬ್ರಹ್ಮಸ್ಥಾನ ಗರೋಡಿ, ಕೊಡಿಪಾಡಿ ಕ್ಷೇತ್ರದಲ್ಲಿ ಧರ್ಮದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕವು ಎ.28ರ ಮಂಗಳವಾರದಿಂದ ಮೇ 3 ಆದಿತ್ಯವಾರದ ತನಕ ಭಕ್ತಿಭಾವಪೂರ್ವಕವಾಗಿ ನಡೆಯಲಿದೆ ಎಂದು ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಕುದ್ರೋಳಿ ಮಾಹಿತಿ ನೀಡಿದರು.


ಶ್ರೀಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿಗಳು ಹಾಗೂ ಕ್ಷೇತ್ರದ ಆರಾಧ್ಯ ಶಕ್ತಿಗಳಾದ ಶ್ರೀಧರ್ಮರಸು ಉಳ್ಳಾಯ, ಶ್ರೀಕೊಡಮಣಿತ್ತಾಯ ಮತ್ತು ತುಳುನಾಡಿನ ಕಾರಣಿಕ ಪುರುಷರಾದ ಶ್ರೀಕೋಟಿ-ಚೆನ್ನಯ್ಯ (ಬ್ರಹ್ಮ-ಬೈದರ್ಕಳ) ಮತ್ತು ಶಕ್ತಿ ಸ್ವರೂಪಿಣಿಯಾಗಿರುವ ಶ್ರೀಮಾಯಂದಾಲೆ ಧರ್ಮದೈವಗಳ ನೇಮ ಜರುಗಲಿದೆ ಎಂದರು.

ಸೇವಾ ಸಮಿತಿ ಅಧ್ಯಕ್ಷ ರೂಪೇಶ್ ರೈ ಮಾತಾಡಿ, “ಮಹೋತ್ಸವದ ಅವಧಿಯಲ್ಲಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ಕಲ್ಪಿಸಲಾಗಿದ್ದು, ದೂರದ ಊರುಗಳಿಂದ ಆಗಮಿಸುವ ಭಕ್ತರಿಗಾಗಿ ಅಗತ್ಯ ಸೌಕರ್ಯಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಊರ-ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಕ್ಷೇತ್ರದ ಧರ್ಮದೈವಗಳ ದರ್ಶನ ಪಡೆದು, ಅವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

3.5 ಕೋಟಿ ವೆಚ್ಚದಲ್ಲಿ ಗರೋಡಿಯ ಪುನರ್ನಿಮಾಣ:
ಕೋಡಿಪಾಡಿ ಶ್ರೀಕ್ಷೇತ್ರ ಬ್ರಹ್ಮಸ್ಥಾನ ಗರೋಡಿಯು ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಭವ್ಯವಾಗಿ ಪುನರ್ನಿರ್ಮಾಣಗೊಂಡಿದೆ. ಕ್ಷೇತ್ರದ ಯಜಮಾನರಾದ ಜಗನ್ನಾಥ ಅತ್ತಾರ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಇನಾಯತ್ ಅಲಿ ಮುಲ್ಕಿ ಹಾಗೂ ಸಂಚಾಲಕ ಸುರೇಂದ್ರ ಶೆಟ್ಟಿ ಮಾರ್ಗದರ್ಶನದಲ್ಲಿ ಊರ ಹತ್ತು ಸಮಸ್ತರು ಹಾಗೂ ಸಮಿತಿಯ ಪದಾಧಿಕಾರಿಗಳ ಶ್ರಮದಿಂದ ಈ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಕ್ಷೇತ್ರದ ನೂತನ ಧ್ವಜಸ್ತಂಭ, ರಾಜಗೋಪುರ, ಪ್ರಧಾನ ಮಹಾದ್ವಾರ, ತೀರ್ಥಕೆರೆ, ವಸಂತಕಟ್ಟೆ, ರಾಜನ್ ದೈವಗಳ ದೈವಸ್ಥಾನ ಹಾಗೂ ಬ್ರಹ್ಮ ಬೈದರ್ಕಳ-ಮಾಯಂದಾಲೆ ಶಕ್ತಿಗಳ ಗರೋಡಿಯನ್ನು ಸಂಪ್ರದಾಯಬದ್ಧವಾಗಿ ನವೀಕರಿಸಲಾಗಿದೆ ಎಂದು ಪದ್ಮರಾಜ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಯಜಮಾನರು ಹಾಗೂ ಗಡಿಪ್ರಧಾನರಾದ ಜಗನ್ನಾಥ ಆತ್ತಾರ್ ಕೋಡಿಪಾಡಿ ಬಾಳಿಕೆ, ಕ್ಷೇತ್ರಾಡಳಿತ ಹಾಗೂ ಜೀರ್ಣೋದ್ಧಾರ ಸಮಿತಿಯ ಸಂಚಾಲಕರಾದ ಸುರೇಂದ್ರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭುಜಂಗ ಶೆಟ್ಟಿ ಕೊಡಿಪಾಡಿ ಬಾಳಿಕೆ ಹಾಗೂ ಪಾಂಡುರಂಗ ಪ್ರಭು ಕೊಡಿಪಾಡಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಮುಂಚೂರು ಹೊಸಮನೆ, ಗೌರವ ಮಾರ್ಗದರ್ಶಕರಾದ ಹರೀಶ್ ಮುಂಚೂರು, ಉಪಾಧ್ಯಕ್ಷರಾದ ಶೋಧನ್ ಕೊಟ್ಟಾರಿ ಮುಂಚೂರು, ವೇದಿಕೆ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಬಾಲಕೃಷ್ಣ ಮುಂಚೂರು ಹಾಗೂ ಮಹಿಳಾ ಸಮಿತಿಯ ಸಂಚಾಲಕಿ ಪ್ರಫುಲ್ಲ ಶೆಟ್ಟಿ ಕೋಡಿಪಾಡಿ ಬಾಳಿಕೆ ಉಪಸ್ಥಿತರಿದ್ದರು.