ಮಂಗಳೂರು: ಭಾರತೀಯ ಸಂಪ್ರದಾಯದ ಪವಿತ್ರ ಸಂಕೇತವಾದ ಗೋಮಾತೆಗೆ ʻರಾಷ್ಟ್ರಮಾತೆ’ ಗೌರವ ನೀಡಬೇಕು ಹಾಗೂ ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕೇಂದ್ರ ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿ ʻಗೋಮಾತೆಯ ಗೌರವ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕೆಂಬ ಉದ್ದೇಶದಿಂದ ದೇಶಾದ್ಯಂತ ನಾಲ್ಕು ಹಂತಗಳಲ್ಲಿ ಪ್ರತಿಭಾವನೆ ಮತ್ತು ಜಾಗೃತಿ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಯಾವುದೇ ಮುಕ್ತಿಪ್ರಧಾನವಿಲ್ಲದೆ, ಕೇವಲ ಗೋಸೇವೆಯನ್ನೇ ಮುಖ್ಯವಾಗಿಸಿಕೊಂಡು ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟಗಳಲ್ಲಿ ಪ್ರಚಾರಕ ಮುಖೇನ ಜನಜಾಗೃತಿ ಮೂಡಿಸಲಾಗುವುದು ಎಂದು ಅವರು ವಿವರಿಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹಿ ಅಭಿಯಾನ ಚುರುಕುಗೊಂಡಿದೆ. ಈಗಾಗಲೇ ಉಡುಪಿ, ಕಾಪು, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ಭಾಗಗಳಲ್ಲಿ ವಿವಿಧ ಗಣ್ಯರು ಹಾಗೂ ಗೋಭಕ್ತರು ಸಾರ್ವಜನಿಕರ ಸಹಿ ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿದ ಸಹಿಗಳನ್ನು ಒಳಗೊಂಡ ಮನವಿಯನ್ನು ಆಯಾ ಭಾಗದ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಗುರೂಜಿ ತಿಳಿಸಿದರು.

ಗೋವು ಕೇವಲ ಪ್ರಾಣಿಯಲ್ಲ, ಅದು ರಾಷ್ಟ್ರೀಯ ಪರಂಪರೆಯ ಭಾಗ. ಗೋವಿಗೆ ರಾಷ್ಟ್ರಮಾತೆ ಗೌರವ ಸಿಗಬೇಕು ಮತ್ತು ಅದನ್ನು ರಾಷ್ಟ್ರೀಯ ದೇವರೆಂದು ಘೋಷಿಸಬೇಕು ಎಂಬುದು ಅಭಿಯಾನದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಈ ಪುಣ್ಯ ಕಾರ್ಯದಲ್ಲಿ ಗೋಪ್ರೇಮಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮಧುಸೂದನ್ ನಾಯಕ್, ಧನರಾಜ್ ಶೆಟ್ಟಿ ಮತ್ತು ಮಧುಸೂದನ್ ಉರ್ವ ಸ್ಟೋರ್ ಉಪಸ್ಥಿತರಿದ್ದರು.