ಬೆಂಗಳೂರು: ರಾಜ್ಯ ರಾಜಕಾರಣದ ʻದೋಸ್ತಿ’ ಅಂಗಳದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಈಗ ಗಾಸಿಪ್ ಕಾಲಂಗಳಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ವಿಧಾನಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಮೂರು ಕೌನ್ಸಿಲ್ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿರುವ ರೀತಿ ಜೆಡಿಎಸ್ ವರಿಷ್ಠರಿಗೆ ತೀವ್ರ ಇರಿಸು-ಮುರಿಸು ಉಂಟುಮಾಡಿದೆ.

ಕೇಂದ್ರದಲ್ಲಿ ಮಂತ್ರಿಯಾಗಿದ್ದರೂ ರಾಜ್ಯದ ಹಿತಾಸಕ್ತಿ ಮತ್ತು ಪಕ್ಷದ ಅಸ್ತಿತ್ವದ ವಿಷಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಿ ಮಾಡಿಕೊಳ್ಳುವಂತೆ ಕಾಣುತ್ತಿಲ್ಲ. ಮೂಲಗಳ ಪ್ರಕಾರ, “ನಮ್ಮನ್ನು ಕೇಳದೆಯೇ ಅಭ್ಯರ್ಥಿಗಳನ್ನು ಘೋಷಿಸುವುದಾದರೆ ಮೈತ್ರಿ ಧರ್ಮಕ್ಕೆ ಬೆಲೆ ಎಲ್ಲಿದೆ?” ಎಂದು ಕುಮಾರಸ್ವಾಮಿ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ಇದೇ ಕಾರಣಕ್ಕೆ ಅವರು ದಿಲ್ಲಿಯಲ್ಲಿ ಜೆ.ಪಿ. ನಡ್ಡಾ ಮತ್ತು ನಿತಿನ್ ನಬಿನ್ ಅವರ ಮುಂದೆ ಈ ‘ಏಕಪಕ್ಷೀಯ’ ನಿರ್ಧಾರದ ಬಗ್ಗೆ ತೀವ್ರ ಆಕ್ಷೇಪ ಎತ್ತಿದ್ದಾರೆ ಎನ್ನಲಾಗಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬಹಿರಂಗವಾಗಿ “ಬಿಜೆಪಿ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ಹೇಳಿರುವುದು, ಮೈತ್ರಿಯಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಎಂಬುದಕ್ಕೆ ಸಾಕ್ಷಿಯಂತಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆ ತರಲು ಬಿಜೆಪಿ ಈ ತಂತ್ರ ಹೂಡಿದೆಯೇ? ಎಂಬ ಗುಸುಗುಸು ಜೆಡಿಎಸ್ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ. ಒಂದು ಕಡೆ ಬಿಜೆಪಿ ಕೌನ್ಸಿಲ್ ಸೀಟು ಕೊಡದಿದ್ದರೆ, ಇನ್ನೊಂದೆಡೆ ಜೆಡಿಎಸ್ ʻಗ್ರೇಟರ್ ಬೆಂಗಳೂರು’ ಚುನಾವಣೆ ನಡೆಸುವಂತೆ ಒತ್ತಡ ಹೇರಿ ಬಿಜೆಪಿಗೆ ತಿರುಗೇಟು ನೀಡಲು ಸಜ್ಜಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಒಳಒಪ್ಪಂದದ ಕಥೆಯೇನು?
ಮಾರ್ಚ್‌ನಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಫೈನಲ್ ಮಾಡುವಾಗ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವುದು ಈಗ ದೊಡ್ಡ ವಿವಾದವಾಗಿದೆ. “ದೋಸ್ತಿ ಅಂದ ಮೇಲೆ ಕೊಡೋದು-ತಗೊಳ್ಳೋದು ಇರಬೇಕು, ಬರೀ ನಮ್ಮನ್ನೇ ಬಿಟ್ಟುಕೊಡಲು ಹೇಳಿದರೆ ಹೇಗೆ?” ಎಂಬುದು ದಳಪತಿಗಳ ಒಳಗಿನ ಬೇಗುದಿ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದು ನಾಯಕರು ಹೇಳುತ್ತಿದ್ದರೂ, ಒಳಗೊಳಗೆ ಸೀಟು ಹಂಚಿಕೆಯ ಈ ಮುನಿಸು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ.