ಕೊಡಗಿನಲ್ಲಿ ಅಮೆರಿಕದ ಮಹಿಳೆ ಮೇಲೆ ಅತ್ಯಾಚಾರ: ಆರೋಪಿ, ಹೋಂಸ್ಟೇ ಮಾಲೀಕನ ಬಂಧನ

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಅತಿಥಿಯಾಗಿ ಬಂದಿದ್ದ ಅಮೆರಿಕ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಾರ್ಖಂಡ್ ಮೂಲದ ಆರೋಪಿ ಮತ್ತು ಹೋಂಸ್ಟೇ ಮಾಲೀಕನನ್ನು ಬಂಧಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಏಪ್ರಿಲ್ 19ರಂದು ಕುಟ್ಟ ಗ್ರಾಮದ ʻದೇವಿ ವಿಲ್ಲಾ’ ಎಂಬ ಖಾಸಗಿ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅಲ್ಲಿ ಕೆಲಸಕ್ಕಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ನೀಡಿ, ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಕೃತ್ಯದ ಬಳಿಕ ಆರೋಪಿ ಮತ್ತು ಹೋಂಸ್ಟೇ ಮಾಲೀಕ ಮಹಿಳೆಯನ್ನು ಸುಮಾರು ಮೂರು ದಿನಗಳ ಕಾಲ ಹೋಂಸ್ಟೇನಲ್ಲೇ ಇರಿಸಿಕೊಂಡಿದ್ದರು ಎನ್ನಲಾಗಿದೆ. ಘಟನೆಯನ್ನು ಮುಚ್ಚಿಹಾಕಲು ಮತ್ತು ಮಹಿಳೆಯನ್ನು ಸಮಾಧಾನಪಡಿಸಲು ಮಾಲೀಕ ಪ್ರಯತ್ನಿಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲಿಂದ ಹೊರಬಂದ ಮಹಿಳೆ ಮೈಸೂರಿಗೆ ತೆರಳಿ ದೂರು ನೀಡಿದ್ದು, ಬಳಿಕ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅತಿಥಿ ದೇವೋ ಭವ’ ಸಂಸ್ಕೃತಿಗೆ ಕಳಂಕ: ಸಿ.ಟಿ. ರವಿ ಆಕ್ರೋಶ
ಈ ಘಟನೆಯ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಎಂಎಲ್ ಸಿ ಸಿ.ಟಿ. ರವಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಘಟನೆಗಳು ಭಾರತದ ‘ಅತಿಥಿ ದೇವೋ ಭವ’ ಎಂಬ ಸಂಸ್ಕೃತಿಗೆ ಏಟು ನೀಡುತ್ತವೆ. ಇದು ನಮ್ಮ ರಾಷ್ಟ್ರದ ಪ್ರತಿಷ್ಠೆಯ ಮೇಲಿನ ಕಳಂಕ. ರಾಜ್ಯ ಸರ್ಕಾರವು ತಪ್ಪಿತಸ್ಥರ ವಿರುದ್ಧ ವಿಳಂಬವಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿದೇಶಿ ಮಹಿಳೆ ಅಮೆರಿಕ ರಾಯಭಾರಿ ಕಚೇರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

error: Content is protected !!