ಮಂಗಳೂರು: 2023ರ ಮಹಿಳಾ ಮೀಸಲಾತಿ ಮಸೂದೆಯನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣವೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ (ನಗರ) ವತಿಯಿಂದ ಬುಧವಾರ ಕಾಂಗ್ರೆಸ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.



ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ ಮಾತನಾಡಿ, “ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯ ಜೊತೆಗೆ ಕ್ಷೇತ್ರ ಮರುವಿಂಗಡಣೆಯ ಮಸೂದೆಯನ್ನು ಲಿಂಕ್ ಮಾಡುವ ಮೂಲಕ ಇಡೀ ಯೋಜನೆಯನ್ನು ಹಳ್ಳ ಹಿಡಿಸಿದೆ. ಮಹಿಳೆಯರಿಗೆ ನಿಜವಾಗಿಯೂ ಮೀಸಲಾತಿ ನೀಡುವ ಮನಸ್ಸಿದ್ದರೆ ಇಂತಹ ಕಠಿಣ ಷರತ್ತುಗಳ ಅಗತ್ಯವಿರಲಿಲ್ಲ. ಇದು ಕೇಂದ್ರ ಸರ್ಕಾರದ ದೊಡ್ಡ ರಾಜಕೀಯ ಸೋಲು,” ಎಂದು ಟೀಕಿಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

‘ನಾರಿ ಶಕ್ತಿ ವಂದನಾ’ ಹೆಸರಿನಲ್ಲಿ ಬಿಜೆಪಿ ಸರ್ಕಾರ ನಾಟಕವಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುವ ಮೂಲಕ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಮಹಿಳಾ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಪಕ್ಷವು ಯಾವತ್ತೂ ಮಹಿಳೆಯರ ಪರವಾಗಿದ್ದು, ಯಾವುದೇ ಷರತ್ತುಗಳಿಲ್ಲದ ಮೀಸಲಾತಿಗಾಗಿ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.

ಮತ್ತೋರ್ವರು ನಾಯಕಿ ಶಾಂತಲಾ ಗಟ್ಟಿ ಮಾತನಾಡಿ, 2023ರಲ್ಲೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿತ್ತು. ಅದನ್ನು ಜಾರಿಗೆ ತರದೆ ಮೊನ್ನೆಯ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡನೆ ಮಸೂದೆಯನ್ನುಸೇರಿಸಿ ಜಾರಿಗೆ ತರಲು ಮುಂದೆ ಬಂದಿದ್ದು ಕೇಂದ್ರ ಸರ್ಕಾರದ ಕುತಂತ್ರ. ಮಹಿಳಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರಾದ ಸ್ವರೂಪ ಶೆಟ್ಟಿ, ನೀತು ಡಿಸೋಜಾ, ಚಂದ್ರಕಲಾ ರಾವ್, ಸಬಿತಾ ಮಿಸ್ಕಿತ್, ವೀಣಾ, ಮೀನಾ ಟೆಲ್ಲಿಸ್, ಗೀತಾ ಪ್ರವೀಣ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.