180 ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಅರಮನೆ ಬುಲ್ಡೋಜರ್‌ನಿಂದ ನೆಲಸಮ

ಅಮರಾವತಿ: ಸುಮಾರು 180ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರನ್ನು ‘ಲವ್ ಟ್ರ್ಯಾಪ್’ ಬಲೆಗೆ ಬೀಳಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮೊಹಮ್ಮದ್ ಅಯಾಜ್ ಅಲಿಯಾಸ್ ತನ್ವೀರ್ ಎಂಬಾತನ ಅಕ್ರಮ ಕಟ್ಟಡದ ಮೇಲೆ ಮಹಾರಾಷ್ಟ್ರ ಸರ್ಕಾರ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದೆ. ಅಮರಾವತಿ ಜಿಲ್ಲೆಯ ಪರತ್ವಾಡ ನಗರದಲ್ಲಿರುವ ಆರೋಪಿಯ ಮನೆಯ ಅಕ್ರಮ ಭಾಗಗಳನ್ನು ನಗರಸಭೆ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

19 ವರ್ಷದ ಆರೋಪಿತ ಮೊಹಮ್ಮದ್ ಅಯಾಜ್, ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಬಾಲಕಿಯರನ್ನು ಸಂಪರ್ಕಿಸಿ ಪ್ರೀತಿಯ ನಾಟಕವಾಡುತ್ತಿದ್ದ ಎನ್ನಲಾಗಿದೆ. ಬಾಲಕಿಯರನ್ನು ಮುಂಬೈ ಮತ್ತು ಪುಣೆಯಂತಹ ನಗರಗಳಿಗೆ ಕರೆದೊಯ್ದು ಅವರ ಸುಮಾರು 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ವಿಡಿಯೋಗಳನ್ನು ಬಳಸಿಕೊಂಡು ಬಾಲಕಿಯರನ್ನು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು ಮತ್ತು ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಕೃತ್ಯದ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅಚಲಪುರ ನಗರಸಭೆಯ ತಂಡವು ಭಾರಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಆರೋಪಿಯ ಮನೆಗೆ ಭೇಟಿ ನೀಡಿತು. ಮನೆಯ ಹೊರಗೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಮೆಟ್ಟಿಲುಗಳು ಸೇರಿದಂತೆ ಇತರ ಅಕ್ರಮ ಭಾಗಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಪ್ರವೀಣ್ ತಾಯಡೆ ಸ್ಥಳದಲ್ಲಿದ್ದು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

ಆರೋಪಿ ಅಯಾಜ್ ಈ ಹಿಂದೆ ಎಐಎಂಐಎಂ (AIMIM) ಪಕ್ಷದ ಪದಾಧಿಕಾರಿಯಾಗಿದ್ದ ಎಂದು ಹೇಳಲಾಗುತ್ತಿದೆಯಾದರೂ, ಪಕ್ಷವು ಇದನ್ನು ನಿರಾಕರಿಸಿದೆ. ಅಯಾಜ್‌ನನ್ನು ಈ ಹಿಂದೆಯೇ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಅಯಾಜ್ ಮತ್ತು ಉಜೇರ್ ಖಾನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಈ ದಂಧೆಯಲ್ಲಿ ಇನ್ನುಳಿದ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

error: Content is protected !!