ಮಂಗಳೂರು: ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಅಡುಗೆ ಅನಿಲದ ಬೆಲೆ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ನಗರದ ಕದ್ರಿ ಸರ್ಕಲ್ ಬಳಿ ವಿನೂತನ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯ ಭಾಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಗ್ಯಾಸ್ ಸಿಲಿಂಡರ್‌ಗೆ ಹೂಮಾಲೆ ಹಾಕಿ ಅದಕ್ಕೆ ಮೋದಿ ಭಾವಚಿತ್ರ ಅಂಟಿಸಿ, ಅದನ್ನು ಚಟ್ಟದ ಮೇಲೆ ಕಟ್ಟಿ ಹೊತ್ತುಕೊಂಡು ಸಾಗುವ ಮೂಲಕ ‘ಅಣಕು ಶವಯಾತ್ರೆ’ ನಡೆಸಿದರು.
ಅಡುಗೆ ಅನಿಲದ ಬೆಲೆ ಜನಸಾಮಾನ್ಯರಿಗೆ ಎಟುಕದಂತಾಗಿರುವ ಸ್ಥಿತಿಯನ್ನು ಬಿಂಬಿಸಲು ಸಿಲಿಂಡರ್ ಶವಯಾತ್ರೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. ಅಲ್ಲದೆ, ಗ್ಯಾಸ್ ಸ್ಟೌವ್ ಮತ್ತು ಖಾಲಿ ಪಾತ್ರೆಗಳನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, “ಕೇಂದ್ರ ಸರ್ಕಾರದ ತಪ್ಪು ವಿದೇಶಾಂಗ ನೀತಿ ಮತ್ತು ಆರ್ಥಿಕ ನಿರ್ವಹಣೆಯ ವೈಫಲ್ಯದಿಂದಾಗಿ ದೇಶದಲ್ಲಿ ಅಡುಗೆ ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಿದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಬದುಕುವುದು ಕಷ್ಟವಾಗಿದೆ,” ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, “ಅಡುಗೆ ಅನಿಲ ಕಾಳಸಂತೆಯಲ್ಲಿ ನಾಲ್ಕೈದು ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆಯಾಗಿದ್ದು, ಆಟೋ ರಿಕ್ಷಾ ಚಾಲಕರು ಎಲ್‌ಪಿಜಿ ಸಿಗದೆ ಪರದಾಡುವಂತಾಗಿದೆ. ನರೇಂದ್ರ ಮೋದಿ ಅವರು ದೇಶದ ಅತ್ಯಂತ ದುರ್ಬಲ ಪ್ರಧಾನಿ ಎಂಬುದು ಸಾಬೀತಾಗಿದೆ,” ಎಂದು ಟೀಕಿಸಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಭಿನಂದನ್ ಹರೀಶ್, ಜಿಲ್ಲಾ ಉಪಾಧ್ಯಕ್ಷರಾದ ಬಶೀರ್, ಸುನೀತ್ ದೇಸಾಯಿ, ಮುಖಂಡರಾದ ಫಾರೂಕ್ ಪೆರ್ನೆ, ಆಸೀಫ್ ಬಜಾಲ್, ಸಮರ್ಥ್ ಭಟ್, ಪೃಥ್ವಿರಾಜ್, ಮೆಲ್ವಿನ್, ಚೇತನ್, ಮಹೇಶ್, ಪ್ರಜ್ವಲ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
