ಪಾಟ್ನಾ: ಬಿಹಾರ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಇದರೊಂದಿಗೆ ಬಿಹಾರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ನಾಯಕರೊಬ್ಬರು ಉನ್ನತ ಹುದ್ದೆಯನ್ನು ಅಲಂಕರಿಸಿದಂತಾಗಿದೆ.

57 ವರ್ಷದ ಸಾಮ್ರಾಟ್ ಚೌಧರಿ ಅವರು ರಾಜ್ಯದ ಪ್ರಬಲ ಒಬಿಸಿ (OBC) ಸಮುದಾಯವಾದ ಕುಶ್ವಾಹ (ಕೊಯೇರಿ) ಜಾತಿಗೆ ಸೇರಿದವರು. ಬಿಹಾರದಲ್ಲಿ ಯಾದವರ ನಂತರ ಕುಶ್ವಾಹ ಅತಿ ದೊಡ್ಡ ಹಿಂದುಳಿದ ಸಮುದಾಯವಾಗಿರುವುದರಿಂದ, ರಾಜಕೀಯ ಸಮೀಕರಣದ ದೃಷ್ಟಿಯಿಂದ ಈ ಆಯ್ಕೆ ಅತ್ಯಂತ ಮಹತ್ವದ್ದಾಗಿದೆ. ಜೆಡಿಯು ಕೂಡ ಬಿಜೆಪಿಗೆ ಇದೇ ಸಮುದಾಯದ ನಾಯಕನನ್ನು ಸಿಎಂ ಮಾಡುವಂತೆ ಸಲಹೆ ನೀಡಿತ್ತು ಎನ್ನಲಾಗಿದೆ.

ನಿತೀಶ್ ಕುಮಾರ್ ಯುಗಾಂತ್ಯ:
ಸುಮಾರು ಎರಡು ದಶಕಗಳ ಕಾಲ 10 ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ನಿತೀಶ್ ಕುಮಾರ್ ಅವರ ಆಡಳಿತ ಪರ್ವ ಅಂತ್ಯಗೊಂಡಿದೆ. ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ನಿತೀಶ್ ಕುಮಾರ್, ಮಂಗಳವಾರ ಮಧ್ಯಾಹ್ನ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಅಧಿಕಾರ ವಹಿಸಿಕೊಳ್ಳಲಿರುವ ಸಾಮ್ರಾಟ್ ಚೌಧರಿ ನೇತೃತ್ವದ ಹೊಸ ಸರ್ಕಾರಕ್ಕೆ ತಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಭರವಸೆ ನೀಡಿದರು.

ನಾಳೆ ಪ್ರಮಾಣವಚನ:
ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಇಂದು ಬೆಳಿಗ್ಗೆ ನಡೆದ ಕೊನೆಯ ಸಂಪುಟ ಸಭೆಯಲ್ಲಿ ನಿತೀಶ್ ಕುಮಾರ್ ಅವರು ಸಂಪುಟ ವಿಸರ್ಜನೆಗೆ ಶಿಫಾರಸು ಮಾಡಿದ್ದು, ಬಿಜೆಪಿ ಈಗ ಹೊಸ ಸರ್ಕಾರ ರಚನೆಗೆ ಸಕಲ ಸಿದ್ಧತೆ ನಡೆಸಿದೆ.