ವಾಷಿಂಗ್ಟನ್/ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯು ಈಗ ಯುದ್ಧದ ನಿರ್ಣಾಯಕ ಹಂತಕ್ಕೆ ತಲುಪಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಇರಾನ್‌ನ ಎಲ್ಲಾ ಪ್ರಮುಖ ಬಂದರುಗಳಿಗೆ ಅಮೆರಿಕ ನೌಕಾಪಡೆಯು ದಿಗ್ಬಂಧನ ವಿಧಿಸಿದೆ. ಇದರಿಂದಾಗಿ ಮತ್ತೆ ಯುದ್ಧ ಭೀತಿ ಉಂಟಾಗಿದ್ದು, ತೈಲ ಬೆಲೆ ಮತ್ತೆ ಏರಿಕೆಯಾಗುವ ಆತಂಕ ಎದುರಾಗಿದೆ.

ಸೋಮವಾರ ಮಧ್ಯಾಹ್ನದಿಂದಲೇ ಜಾರಿಗೆ ಬಂದಿರುವ ಈ ದಿಗ್ಬಂಧನದ ಬಗ್ಗೆ ಅಧ್ಯಕ್ಷ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಹಾರ್ಮುಜ್ ಜಲಸಂಧಿಯ ನಿರ್ಬಂಧಿತ ಪ್ರದೇಶದ ಬಳಿ ಇರಾನ್‌ನ ಯಾವುದೇ ʻದಾಳಿ ನೌಕೆಗಳು’ (Attack Ships) ಸುಳಿದಾಡಿದರೆ ಅವುಗಳನ್ನು ತಕ್ಷಣವೇ ಧ್ವಂಸಗೊಳಿಸಲಾಗುವುದು” ಎಂದು ಅವರು ಗುಡುಗಿದ್ದಾರೆ. ಇರಾನ್‌ನ ಪರ್ಷಿಯನ್ ಗಲ್ಫ್ ತೀರದ ಎಲ್ಲಾ ಬಂದರುಗಳಿಗೆ ಈ ನಿರ್ಬಂಧ ಅನ್ವಯಿಸಲಿದೆ.

ಈ ನೌಕಾ ದಿಗ್ಬಂಧನವು ಕೇವಲ ಇರಾನ್‌ಗೆ ಹೋಗುವ ಅಥವಾ ಅಲ್ಲಿಂದ ಹೊರಬರುವ ಹಡಗುಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸ್ಪಷ್ಟಪಡಿಸಿದೆ. ಇತರ ದೇಶಗಳಿಗೆ ಸೇರಿದ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಆದರೂ, ಇರಾನ್ ತನ್ನ ಜಲಪ್ರದೇಶದ ಮೇಲೆ ಅಮೆರಿಕ ಹಡಗುಗಳು ಬಂದರೆ ಅದನ್ನು ʻಸಮುದ್ರಗಳ ಲೂಟಿ’ (Piracy) ಎಂದು ಕರೆದಿದ್ದು, ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿದೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಇತ್ತೀಚಿನ ಮಾತುಕತೆಗಳ ಬಗ್ಗೆ ಪ್ರತಿಕ್ರಿಯಿಸಿದ್ದು, “ಇರಾನ್ ಜೊತೆಗಿನ ಮಾತುಕತೆಯಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಮತ್ತು ಕೆಲವು ʻರೆಡ್ ಲೈನ್’ (ಗಡಿ) ಗಳನ್ನು ಸ್ಪಷ್ಟಪಡಿಸಿದ್ದೇವೆ. ಇರಾನ್ ಈಗ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮಾತುಕತೆಯ ಸ್ವರೂಪವೇ ಬದಲಾಗಲಿದೆ” ಎಂದು ಎಚ್ಚರಿಸಿದ್ದಾರೆ.

ವಿಶ್ವದ ಸುಮಾರು ಶೇ. 25ರಷ್ಟು ತೈಲ ಸಾಗಾಣಿಕೆಯಾಗುವ ಈ ಮಾರ್ಗದಲ್ಲಿ ದಿಗ್ಬಂಧನ ಉಂಟಾಗಿರುವುದರಿಂದ ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಭಾರತ ಸೇರಿದಂತೆ ಏಷ್ಯಾದ ದೇಶಗಳಿಗೆ ಇದು ಆರ್ಥಿಕ ಸಂಕಷ್ಟ ತರಬಹುದು ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.