ದರೋಡೆಕೋರರ ಗುಂಡೇಟಿಗೆ ಯುವ ಫುಟ್‌ಬಾಲ್ ಆಟಗಾರ ಡೊಮಿನಿಕ್ ಫ್ರಿಂಪಾಂಗ್ ಬಲಿ!

ಅಕ್ರಾ (ಘಾನಾ): ಘಾನಾ ಪ್ರೀಮಿಯರ್ ಲೀಗ್‌ನ ಪಂದ್ಯವೊಂದನ್ನು ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಬೆರೆಕಮ್ ಚೆಲ್ಸಿಯಾ (Berekum Chelsea) ಫುಟ್‌ಬಾಲ್ ಕ್ಲಬ್‌ನ ಬಸ್ ಮೇಲೆ ಸಶಸ್ತ್ರ ದರೋಡೆಕೋರರು ದಾಳಿ ನಡೆಸಿದ್ದು, ಈ ಘಟನೆಯಲ್ಲಿ 20 ವರ್ಷದ ಭರವಸೆಯ ಆಟಗಾರ ಡೊಮಿನಿಕ್ ಫ್ರಿಂಪಾಂಗ್ (Dominic Frimpong) ಸಾವನ್ನಪ್ಪಿದ್ದಾರೆ.

ಘಟನೆ ನಡೆದಿದ್ದು ಹೇಗೆ?:
ಭಾನುವಾರ ರಾತ್ರಿ ಸಮಾರ್ಟೆಕ್ಸ್ ತಂಡದ ವಿರುದ್ಧದ ಪಂದ್ಯ ಮುಗಿಸಿ ಬೆರೆಕಮ್‌ಗೆ ಹಿಂದಿರುಗುತ್ತಿದ್ದಾಗ ಗೋಸೊ ಮತ್ತು ಬಿಬಿಯಾನಿ ನಡುವಿನ ರಸ್ತೆಯಲ್ಲಿ ಈ ಘೋರ ಕೃತ್ಯ ನಡೆದಿದೆ. ದರೋಡೆಕೋರರು ರಸ್ತೆಗೆ ಅಡ್ಡಲಾಗಿ ತಡೆಗೋಡೆಗಳನ್ನು ನಿರ್ಮಿಸಿ ಬಸ್ ಅನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಚಾಲಕ ಬಸ್ ಅನ್ನು ಹಿಂದಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಮುಖವಾಡ ಧರಿಸಿದ್ದ ಕಿರಾತಕರು ಏಕಾಏಕಿ ರೈಫಲ್ ಮತ್ತು ಬಂದೂಕುಗಳಿಂದ ಗುಂಡಿನ ಸುರಿಮಳೆಗರೆದಿದ್ದಾರೆ.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ  ಇಲ್ಲಿ ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ⬇️

ದಾಳಿಯಿಂದ ಕಂಗೆಟ್ಟ ಆಟಗಾರರು ಮತ್ತು ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ಹತ್ತಿರದ ಪೊದೆಗಳು ಮತ್ತು ಕಾಡಿನೊಳಗೆ ಓಡಿ ಅಡಗಿಕೊಂಡಿದ್ದಾರೆ. ಆದರೆ, ಈ ವೇಳೆ ತಲೆಗೆ ಗುಂಡೇಟು ತಗುಲಿದ್ದ ಡೊಮಿನಿಕ್ ಫ್ರಿಂಪಾಂಗ್ ಅವರನ್ನು ಕೂಡಲೇ ಬಿಬಿಯಾನಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

ಈ ದುರಂತದ ಬಗ್ಗೆ ಘಾನಾ ಫುಟ್‌ಬಾಲ್ ಅಸೋಸಿಯೇಷನ್ ತೀವ್ರ ಆಘಾತ ವ್ಯಕ್ತಪಡಿಸಿದೆ. “ಡೊಮಿನಿಕ್ ಫ್ರಿಂಪಾಂಗ್ ಅವರ ನಿಧನವು ಕೇವಲ ಬೆರೆಕಮ್ ಚೆಲ್ಸಿಯಾ ಕ್ಲಬ್‌ಗೆ ಮಾತ್ರವಲ್ಲದೆ ಇಡೀ ಘಾನಾ ಫುಟ್‌ಬಾಲ್‌ಗೆ ತುಂಬಲಾರದ ನಷ್ಟ. ಅವರು ಅದ್ಭುತ ಪ್ರತಿಭೆಯಾಗಿದ್ದರು” ಎಂದು ಜಿಎಫ್‌ಎ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಮುಂದೆ ದೇಶೀಯ ಪಂದ್ಯಗಳಿಗಾಗಿ ಪ್ರಯಾಣಿಸುವ ಕ್ಲಬ್‌ಗಳಿಗೆ ಹೆಚ್ಚಿನ ಭದ್ರತೆ ಒದಗಿಸುವುದಾಗಿ ಸಂಸ್ಥೆ ಭರವಸೆ ನೀಡಿದೆ.

ಘಾನಾದಲ್ಲಿ ಕ್ರೀಡಾ ತಂಡಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ಇದು ಮೊದಲೇನಲ್ಲ. 2023ರಲ್ಲಿಯೂ ಲೆಗೊನ್ ಸಿಟೀಸ್ ತಂಡದ ಬಸ್ ಮೇಲೆ ಇದೇ ರೀತಿ ದಾಳಿ ನಡೆದಿತ್ತು. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ದಾಳಿಕೋರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

error: Content is protected !!