ಆಟವಾಡುತ್ತಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ: 150ರೂ. ಕೊಟ್ಟು ಬಾಯಿಮುಚ್ಚಿಸಲು ಯತ್ನ


ಬೆಂಗಳೂರು: ಮನೆ ಸಮೀಪ ಆಟವಾಡುತ್ತಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಬಿಹಾರ ಮೂಲದ ಕಾರ್ಮಿಕನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಮೊಹಮ್ಮದ್‌ ಮುನ್ನಾ (25) ಬಂಧಿತ ಆರೋಪಿ.

ಮೊಹಮ್ಮದ್‌ ಮುನ್ನಾ ಎರಡು ದಿನಗಳ ಹಿಂದೆ ಮನೆ ಸಮೀಪದ 11 ವರ್ಷದ ಬಾಲಕಿ ಮೇಲೆ ಆತ್ಯಾಚಾರ ಎಸಗಿದ್ದ. ಈ ಸಂಬಂಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ ಮೂಲದ ಸಂತ್ರಸ್ತೆ ಪೋಷಕರು ಕೆಲ ವರ್ಷಗಳಿಂದ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಬುಧವಾರ ಸಂಜೆ ಮನೆಗೆ ಬಂದಾಗ ಬಾಲಕಿಯ ಕೈಯಲ್ಲಿ 150 ರೂ. ಇರುವುದನ್ನು ಗಮನಿಸಿ ತಾಯಿ, ಪುತ್ರಿಯನ್ನು ಪ್ರಶ್ನಿಸಿದಾಗ, ತನ್ನ ಮೇಲಿನ ದೌರ್ಜನ್ಯವನ್ನು ಹೇಳಿಕೊಂಡಿದ್ದಾಳೆ.

ಬಳಿಕ ಹಣ ನೀಡಿ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಆತ ಹೇಳಿದ್ದಾನೆ. ಈ ಹಿಂದೆಯೂ ಇದೇ ರೀತಿ ದೌರ್ಜನ್ಯ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಅದರಿಂದ ಆತಂಕಗೊಂಡ ಪೋಷಕರು, ನಿರ್ಮಾಣ ಹಂತದ ಕಟ್ಟಡ ಬಳಿ ಹೋಗುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿ ಬಳಿಕ ಸಿಕ್ಕಿಬಿದ್ದಿದ್ದಾನೆ.

ನಂತರ ಆರೋಪಿಯನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!