“ಉಡುಪಿ ಜಿಲ್ಲಾಸ್ಪತ್ರೆ ಶೀಘ್ರದಲ್ಲೇ ಲೋಕಾರ್ಪಣೆ: ಪ್ರತಿಭಟನೆ ಎಚ್ಚರಿಕೆಯ ಹಿಂದೆ ರಾಜಕೀಯ ದುರುದ್ದೇಶ -ಮಂಜುನಾಥ ಭಂಡಾರಿ

ಬೆಂಗಳೂರು: ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಜಿಲ್ಲಾಸ್ಪತ್ರೆ ಲೋಕಾರ್ಪಣೆಗೆ ವಿಳಂಬವಾದರೆ ಪ್ರತಿಭಟನೆ ನಡೆಸುವುದಾಗಿ ನೀಡಿರುವ ಎಚ್ಚರಿಕೆಯು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಿಧಾನ ಪರಿಷತ್ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪತ್ರಿಕಾ ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯ ಕಾಮಗಾರಿ ಶೇ. 90ರಷ್ಟು ಕೆಲಸಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಉತ್ತರ ನೀಡಿರುವ ಶಾಸಕರು, 2026ರ ಮಾರ್ಚ್ 4ರಂದು ಹೊರಡಿಸಿರುವ ನೂತನ ಆದೇಶದ ಪ್ರಕಾರ, ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 150.50 ಕೋಟಿ ರೂ.ಗಳಿಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಾಮಗಾರಿ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರಿಗೆ 85.81 ಲಕ್ಷ ರೂ.ಗಳ ದಂಡ ವಿಧಿಸುವ ಮೂಲಕ ಸರಕಾರ ಶಿಸ್ತು ಕ್ರಮ ಜರುಗಿಸಿದ್ದು ಹೆಚ್ಚುವರಿ 35.50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಬಾಕಿ ಇರುವ ಕೆಲಸಗಳನ್ನು ಶೀಘ್ರವಾಗಿ ಮುಗಿಸಿ ಆಸ್ಪತ್ರೆಯನ್ನು ಜನರ ಸೇವೆಗೆ ಮುಕ್ತಗೊಳಿಸಲಿದೆ ಎಂದಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಉಡುಪಿ ಜಿಲ್ಲೆಯ ಅಜ್ಜರಕಾಡುವಿನಲ್ಲಿರುವ ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸುವ ಮತ್ತು ಸಿಬ್ಬಂದಿ ವಸತಿ ಗೃಹ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳ ಕಾಮಗಾರಿಯ ಪರಿಷ್ಕೃತ ಅಂದಾಜು ಪಟ್ಟಿಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೊದಲು 115 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಈ ಯೋಜನೆಯ ಮೊತ್ತವು ಈಗ ಒಟ್ಟು 150.50 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ವೆಚ್ಚ ಏರಿಕೆಗೆ ಕಾರಣಗಳು:
ಈ ಯೋಜನೆಯ ಮೂಲ ಅಂದಾಜು ಮೊತ್ತಕ್ಕಿಂತ 35.50 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚ ತಗುಲಲು ಹಲವಾರು ತಾಂತ್ರಿಕ ಕಾರಣಗಳಿದ್ದು ಮುಖ್ಯವಾಗಿ ಜಿ.ಎಸ್.ಟಿ ದರದಲ್ಲಿನ ವ್ಯತ್ಯಾಸ (7.20 ಕೋಟಿ ರೂ.), ಸಾಮಗ್ರಿಗಳ ಬೆಲೆ ಏರಿಕೆಯ ಹೊಂದಾಣಿಕೆ (18.30 ಕೋಟಿ ರೂ.) ಹಾಗೂ ಟೆಂಡರ್ ಪ್ರೀಮಿಯಂ ಮೊತ್ತವು ಏರಿಕೆಯಾಗಿದೆ. ಅಲ್ಲದೆ, ಕಾಮಗಾರಿ ನಡೆಯುವ ಸ್ಥಳದಲ್ಲಿದ್ದ LMO ಟ್ಯಾಂಕ್ ಸ್ಥಳಾಂತರಿಸುವುದು ಮತ್ತು ಅಗ್ನಿ ಸುರಕ್ಷತಾ ನಿಯಮಗಳಿಗಾಗಿ ಕೈಗೊಂಡ ಹೆಚ್ಚಿನ ಕೆಲಸಗಳು ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿವೆ.

ಹೈದ್ರಾಬಾದ್ ಮೂಲದ ಮೆ: ಸಿದ್ದಾರ್ಥ ಇನ್ ಪ್ರಾಟಿಕ್ ಮತ್ತು ಸರ್ವೀಸಸ್ ಸಂಸ್ಥೆಯು ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದಿದೆ. ಈ ಯೋಜನೆಯನ್ನು ವಾಸ್ತವವಾಗಿ 2023ರ ಡಿಸೆಂಬರ್ 14ರೊಳಗೆ ಪೂರ್ಣಗೊಳಿಸಬೇಕಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿದ್ದು, 315 ದಿನಗಳ ಕಾಲಾವಧಿ ವಿಸ್ತರಣೆ ನೀಡಲಾಗಿತ್ತು. ವಿಳಂಬಕ್ಕಾಗಿ ಗುತ್ತಿಗೆದಾರರಿಗೆ ಸುಮಾರು 85.81 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ.

ಹೆಚ್ಚುವರಿಯಾಗಿ ಅವಶ್ಯವಿರುವ 35.50 ಕೋಟಿ ರೂ.ಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಬಂಧಿತ ಲೆಕ್ಕ ಶೀರ್ಷಿಕೆಯಡಿ ಲಭ್ಯವಿರುವ ಅನುದಾನದಿಂದ ಭರಿಸಲು ಸರ್ಕಾರ ಆದೇಶಿಸಿದೆ. ಈ ಕುರಿತು ಮಾರ್ಚ್ 4, 2026ರಂದು ಅಧಿಕೃತ ನಡವಳಿಗಳನ್ನು ಹೊರಡಿಸಲಾಗಿದ್ದು, ಜಿಲ್ಲೆಯ ಜನರಿಗೆ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಂಡಾರಿ ಅವರು ಹೇಳಿದ್ದಾರೆ.

error: Content is protected !!