ಉಡುಪಿ: ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ ಭಂಡಾರಿ ಅವರು ನಡೆಸಿದ ನಿರಂತರ ಪ್ರಯತ್ನಕ್ಕೆ ಮಹತ್ವದ ಯಶಸ್ಸು ಸಿಕ್ಕಿದೆ. ಶಾಸಕರ ವಿಶೇಷ ಶಿಫಾರಸ್ಸನ್ನು ಪುರಸ್ಕರಿಸಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯು, ತನ್ನ ಸಿ.ಎಸ್.ಆರ್ (CSR) ನಿಧಿಯಡಿ ಜಿಲ್ಲೆಯ ಆರು ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕೈಜೋಡಿಸಿದೆ.

ಹೆಬ್ರಿ ತಾಲೂಕಿನ ಮುನಿಯಾಲು ಸೇರಿದಂತೆ ಹಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕೊಠಡಿಗಳ ಕೊರತೆ ಎದುರಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಮಂಜುನಾಥ ಭಂಡಾರಿ ಅವರು, ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯತೆಗಳನ್ನು ಮನಗಂಡಿದ್ದರು. ಬಳಿಕ ಎಂಆರ್‌ಪಿಎಲ್ ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದು, ಬಡ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅನುದಾನ ನೀಡುವಂತೆ ಒತ್ತಾಯಿಸಿದ್ದರು. ಶಾಸಕರ ಈ ಕಾಳಜಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಂಆರ್‌ಪಿಎಲ್ ಸಂಸ್ಥೆ, ತುರ್ತಾಗಿ ಅನುದಾನ ಒದಗಿಸಲು ಒಪ್ಪಿಗೆ ಸೂಚಿಸಿದೆ.

ಭರ್ಜರಿ ಅನುದಾನ
ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರಾಥಮಿಕ ವಿಭಾಗ), ಮುನಿಯಾಲು ಶಾಲೆಯ ಕೊಠಡಿ ನಿರ್ಮಾಣಕ್ಕೆ 95 ಲಕ್ಷ ರೂ., ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹೆಬ್ರಿ: ಶಾಲೆಗೆ 95 ಲಕ್ಷ ರೂ., ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಹೆಬ್ರಿ ಇದರ ಅಭಿವೃದ್ಧಿ ಕಾಮಗಾರಿಗಳಿಗೆ 78.80 ಲಕ್ಷ ರೂ. ಹಾಗೂ ಬಜಗೋಳಿ, ಸಿದ್ದಾಪುರ ಮತ್ತು ಬಸರೂರು ಸರ್ಕಾರಿ ಪ್ರೌಢಶಾಲೆ ಸೇರಿ ಈ ಮೂರೂ ಶಾಲೆಗಳಿಗೆ ತಲಾ 78.80 ಲಕ್ಷ ರೂ. ನಂತೆ ಅನುದಾನ ಹಂಚಿಕೆಯಾಗಿದೆ.

ಮುನಿಯಾಲು ಶಾಲೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಆಗಿ ಮೇಲ್ದರ್ಜೆಗೇರುತ್ತಿದ್ದು, ಶಾಸಕರ ಈ ಪ್ರಯತ್ನದಿಂದಾಗಿ ಅಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕೊಠಡಿಗಳ ಸೌಲಭ್ಯ ದೊರೆಯಲಿದೆ. ಕ್ಷೇತ್ರಾಭಿವೃದ್ಧಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಮಂಜುನಾಥ ಭಂಡಾರಿ ಅವರ ಶ್ರಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೆರೆದ ಎಂಆರ್‌ಪಿಎಲ್ ಸಂಸ್ಥೆಯ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಅನುದಾನದ ಬಳಕೆಯಿಂದ ಸರ್ಕಾರಿ ಶಾಲೆಗಳ ಮುಖಪುಟವೇ ಬದಲಾಗಲಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿದೆ.
