ಕಡಬ ಪೊಲೀಸರ ಮಿಂಚಿನ ಕಾರ್ಯಾಚರಣೆ: ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ 18 ಜಾನುವಾರುಗಳ ರಕ್ಷಣೆ, ಓರ್ವ ಅರೆಸ್ಟ್!

ಕಡಬ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್ ಒಂದನ್ನು ಬೆನ್ನಟ್ಟಿದ ಕಡಬ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ 18 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿ ಹೊಸೂರು ಮೂಲದ ಅಕ್ರಮ್ ಪಾಷಾ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದಾನೆ.

ಹಾಸನದಿಂದ ಕೇರಳಕ್ಕೆ ಕಂಟೇನರ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಪಕ್ಕಾ ಮಾಹಿತಿ ಕಡಬ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಕಡಬ ಠಾಣಾ ಸಬ್ ಇನ್‌ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ನೇತೃತ್ವದ ತಂಡ, ಶುಕ್ರವಾರ ಬೆಳಗಿನ ಜಾವ ಕಡಬದ ‘ಕನ್ವರೆ’ ಎಂಬಲ್ಲಿ ಹೊಂಚು ಹಾಕಿತ್ತು.

ಬೆಳಗಿನ ಜಾವ ವೇಗವಾಗಿ ಬಂದ ಕಂಟೇನರ್ ಅನ್ನು ತಡೆದು ನಿಲ್ಲಿಸಿದ ಪೊಲೀಸರು ತಪಾಸಣೆ ನಡೆಸಿದಾಗ, ವಾಹನದೊಳಗೆ ಅಕ್ರಮವಾಗಿ ತುಂಬಿದ್ದ 18 ಜಾನುವಾರುಗಳು ಪತ್ತೆಯಾಗಿವೆ. ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದು, ಪೊಲೀಸರು ಎಲ್ಲವನ್ನೂ ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಸದ್ಯ ಪೊಲೀಸರು ಅಕ್ರಮ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪರಾರಿಯಾದ ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ. ಕಡಬ ಪೊಲೀಸರ ಈ ಸಮಯಪ್ರಜ್ಞೆ ಮತ್ತು ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

error: Content is protected !!