ಮಂಗಳೂರಿನ ಹೃದಯಭಾಗದಲ್ಲೊಂದು ಪವಾಡದ ಗುಡಿ! ಹರಕೆ ಹೊತ್ತರೆ ಕ್ಷಣಾರ್ಧದಲ್ಲೇ ಕೈಗೂಡುತ್ತೆ ಕೆಲಸ: ಇದು ಕರಂಗಲ್ಪಾಡಿಯ ʻಮಹಾಸತಿ-ಭಗವತಿ’ ಶಕ್ತಿ!

ಮಂಗಳೂರು: ಅರಮನೆಗಳಂತಹ ದೇವಸ್ಥಾನಗಳ ನಡುವೆ, ಒಂದು ಅಶ್ವತ್ಥ ಮರದ ಕೆಳಗೆ, ಹಸಿರು ಗಿಡಗಂಟಿಗಳ ಮಧ್ಯೆ ಅಡಗಿದ್ದ ಆ ಶಕ್ತಿ ಇಂದು ಸಾವಿರಾರು ಭಕ್ತರ ಆಶಾಕಿರಣವಾಗಿದೆ. ಅದು ಮಂಗಳೂರಿನ ಕರಂಗಲ್ಪಾಡಿ ಮಾರುಕಟ್ಟೆ ಪಕ್ಕದಲ್ಲಿರುವ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಸಾನಿಧ್ಯ. ಇದು ಬರೀ ಗುಡಿಯಲ್ಲ, ನಂಬಿದವರ ಪಾಲಿನ ಕಲ್ಪವೃಕ್ಷ!

ಮೊದಲು ಇದ್ದ ಸ್ಥಿತಿ

 

ಹತ್ತಾರು ವರ್ಷಗಳಿಂದ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ಈ ಪುಟ್ಟ ಗುಡಿ ಬೆಳಕಿಗೆ ಬಂದಿದ್ದು ಕೊರೊನಾ ಎಂಬ ಕರಾಳ ಕಾಲದಲ್ಲಿ. ಸುದನ್ ವಿದ್ಯಾನಗರ ಪಂಜೀಮೊಗರು ಎಂಬುವವರು ತಮ್ಮ ತಂದೆಯ ತೀವ್ರ ಅನಾರೋಗ್ಯದ ಸಮಯದಲ್ಲಿ, ಈ ಗುಡಿಯ ಮುಂದೆ ನಿಂತು ಕೇವಲ 50 ರೂಪಾಯಿಯ ಹೂವಿನ ಹರಕೆ ಹೊತ್ತಿದ್ದರು. ಅಚ್ಚರಿ ಎಂಬಂತೆ, ವೈದ್ಯರಿಗೂ ಸಾಧ್ಯವಾಗದ ಪವಾಡ ನಡೆಯಿತು, ಅವರ ತಂದೆ ಗುಣಮುಖರಾದರು! ಅಲ್ಲಿಂದ ಶುರುವಾದ ಈ ದೇವಿಯ ಮಹಿಮೆ ಇಂದು ಊರೆಲ್ಲಾ ಹಬ್ಬಿದೆ.

ದಕ್ಷಪುತ್ರಿ ಮಹಾಸತಿಯ ಸಾನಿಧ್ಯ: ಇತಿಹಾಸವೇ ನಿಗೂಢ!
ಪರಶಿವನ ಅರ್ಧಾಂಗಿ, ದಕ್ಷಯಜ್ಞದಲ್ಲಿ ಪ್ರಾಣಾಹುತಿ ನೀಡಿದ ಆ ದಕ್ಷಪುತ್ರಿಯೇ ಇಲ್ಲಿ ರೇಖಾಶಿಲ್ಪದ ರೂಪದಲ್ಲಿ ನೆಲೆಸಿದ್ದಾಳೆ ಎಂಬುದು ಭಕ್ತರ ನಂಬಿಕೆ. ಈ ಗುಡಿಯನ್ನು ಯಾರು ಕಟ್ಟಿದರು? ಇದರ ಇತಿಹಾಸವೇನು? ಯಾರಿಗೂ ಗೊತ್ತಿಲ್ಲ. ಆದರೆ, ಇಲ್ಲಿನ ಪವರ್ ಮಾತ್ರ ಅಪ್ರತಿಮ. ಕರಂಗಲ್ಪಾಡಿಯ ಚಂದ್ರಮೌಳೀಶ್ವರ ದೇವಸ್ಥಾನದ ಸಮೀಪವಿರುವ ಈ ಸಾನಿಧ್ಯಕ್ಕೆ ಈಗ ಭಕ್ತರ ದಂಡೇ ಹರಿದು ಬರುತ್ತಿದೆ.

ಈ ದೇವಿಗೆ ಸಾವಿರಾರು ರೂಪಾಯಿಗಳ ಕಾಣಿಕೆ ಬೇಡ, ದೊಡ್ಡ ದೊಡ್ಡ ಹರಕೆಗಳೂ ಬೇಡ. ನಿಮಗಾಗದ ಕೆಲಸವನ್ನು ಈಕೆಯ ಮುಂದೆ ಅರಿಕೆ ಮಾಡಿ, ಕೈಮುಗಿದು ಬಂದರೆ ಸಾಕು, ಕ್ಷಣಾರ್ಧದಲ್ಲಿ ಕೆಲಸ ಸಕ್ಸಸ್! ಕೆಲಸವಾದ ಮೇಲೆ ಒಂದು ಹೂವು ಅರ್ಪಿಸಿ, ಆರತಿ ಬೆಳಗಿದರೆ ಸಾಕು, ತಾಯಿ ತೃಪ್ತಳಾಗುತ್ತಾಳೆ. ವಿಶೇಷವೆಂದರೆ, ಇಲ್ಲಿ ಯಾರು ಬೇಕಾದರೂ ಪೂಜೆ ಸಲ್ಲಿಸಬಹುದು. ಮಂಗಳೂರಿನವರಿಗಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ಮಂದಿ ಈ ದೇವಿಯ ಪವಾಡವನ್ನು ನಂಬಿ ತಂಡೋಪತಂಡವಾಗಿ ಬರುತ್ತಿದ್ದಾರೆ.

ಭಕ್ತರ ಇಷ್ಟಾರ್ಥಗಳು ಈಡೇರುತ್ತಿದ್ದಂತೆ, ಇಂದು ಈ ಸಾನಿಧ್ಯ ಜೀರ್ಣೋದ್ಧಾರಗೊಂಡಿದೆ. ದೇವಿಗೆ ಭಕ್ತಿಯ ಸಂಕೇತವಾಗಿ ರಜತ ಕವಚವನ್ನು ಅರ್ಪಿಸಲಾಗಿದೆ. ಸುದನ್ ವಿದ್ಯಾನಗರ ಅವರ ಪೌರೋಹಿತ್ಯದಲ್ಲಿ ವರ್ಷಂಪ್ರತಿ ಯಕ್ಷಗಾನ, ಅನ್ನದಾನ ಮತ್ತು ವಿಶೇಷ ಪರ್ವ ಸೇವೆಗಳು ಅದ್ಧೂರಿಯಾಗಿ ನಡೆಯುತ್ತಿವೆ. “ನಿಮ್ಮ ಸಮಸ್ಯೆ ಏನೇ ಇರಲಿ, ಈ ತಾಯಿಯ ಮುಂದೆ ಬಂದು ನಿಲ್ಲಿ, ಸಾಕು” ಎನ್ನುತ್ತಾರೆ ಇಲ್ಲಿನ ಭಕ್ತರು.

ನಿಮ್ಮ ಸಮಸ್ಯೆ ಏನೇ ಇರಲಿ.. ಇಲ್ಲಿಗೆ ಬನ್ನಿ!
ಕೋರ್ಟು-ಕಚೇರಿ ಅಲೆಯುತ್ತಿರಲಿ, ಆರೋಗ್ಯದ ಸಮಸ್ಯೆಯಿರಲಿ ಅಥವಾ ಮದುವೆ-ಉದ್ಯೋಗದ ಚಿಂತೆಯಿರಲಿ.. ಒಮ್ಮೆ ಕರಂಗಲ್ಪಾಡಿಯ ಅಶ್ವತ್ಥ ಮರದ ಕೆಳಗಿರುವ ಈ ಮಹಾಸತಿ-ಭಗವತಿ ಅಮ್ಮನವರ ಮುಂದೆ ನಿಂತು ಕಣ್ಣು ಮುಚ್ಚಿ ಪ್ರಾರ್ಥಿಸಿ. ದೊಡ್ಡ ಹರಕೆ ಬೇಡ, ದೇವಿಗೆ ಒಂದು ಹೂವು ಅರ್ಪಿಸಿದರೆ ಸಾಕು, ನಿಮ್ಮ ಬದುಕಿನ ದಾರಿ ಸುಗಮವಾಗುತ್ತದೆ!

error: Content is protected !!