ನಾಳೆ ಕರಂಗಲ್ಪಾಡಿ ಶ್ರೀ ಮಹಾಸತಿ- ಭಗವತಿ ಸನ್ನಿಧಿಯಲ್ಲಿ ಭಕ್ತಿ ಸಂಭ್ರಮ!

ಮಂಗಳೂರು: ನಗರದ ಕರಂಗಲ್ಪಾಡಿಯ ಶ್ರೀ ಮಹಾಸತಿ ಹಾಗೂ ಶ್ರೀ ಭಗವತಿ ಅಮ್ಮನವರ ಸಾನಿಧ್ಯದಲ್ಲಿ ಏಪ್ರಿಲ್ 4ರ ಶನಿವಾರದಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ ಎಂದು ಅಮ್ಮನವರ ಭಕ್ತವೃಂದದ ಪ್ರಮುಖರಾದ ಸುದನ್ ವಿದ್ಯಾನಗರ ಪಂಜೀಮೊಗರು ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮನವರ ಸಾನಿಧ್ಯದಲ್ಲಿ ಅಂದು ಭಕ್ತಿಪೂರ್ವಕ ಸೇವೆಗಳು ಹಾಗೂ ವಿಶೇಷ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ವಿವರ ನೀಡಿದರು.

 

ಬೆಳಿಗ್ಗೆ 5:00ಕ್ಕೆ ಶ್ರೀ ಕೃಷ್ಣ ಅಡಿಗರ ನೇತೃತ್ವದಲ್ಲಿ ಪವಿತ್ರ ʻಗಣಹೋಮ’ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಮಧ್ಯಾಹ್ನ 12:30ಕ್ಕೆ ಶ್ರೀ ಮಹಾಸತಿ ಮತ್ತು ಶ್ರೀ ಭಗವತಿ ಅಮ್ಮನವರಿಗೆ ಸಾಮೂಹಿಕ ಪೂಜೆ ಹಾಗೂ ಪ್ರಾರ್ಥನೆ, ಸಂಜೆ 4:00ಕ್ಕೆ ಕದ್ರಿ ಶ್ರೀಮಂಜುನಾಥ ದೇವಸ್ಥಾನದಿಂದ ಅಮ್ಮನವರ ಸಾನಿಧ್ಯದವರೆಗೆ ನೂತನ ರಜತ ಕವಚ, ಪ್ರಭಾವಳಿ ಹಾಗೂ ನಂದಾದೀಪದ ಭವ್ಯ ಮೆರವಣಿಗೆ ನಡೆಯಲಿದೆ. ಭಕ್ತರು ಈ ಮೆರವಣಿಗೆಯ ಮೂಲಕ ದೇವಿಗೆ ರಜತ ಆಭರಣಗಳನ್ನು ತಂದು ಸಮರ್ಪಿಸಲಿದ್ದಾರೆ. ಸಂಜೆ 6:30ಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಜರುಗಲಿದೆ ಎಂದರು.


ರಾತ್ರಿ 8:00 ಗಂಟೆಗೆ ಶ್ರೀ ಕ್ಷೇತ್ರ ಬಪ್ಪನಾಡು ದುರ್ಗಾಪರಮೇಶ್ವರಿ ಅಮ್ಮನವರಿಗೆ ಚೌಕಿ ಪೂಜೆ ನೆರವೇರಲಿದ್ದು, ತದನಂತರ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ. ಕಾರ್ಯಕ್ರಮದ ಸಮಾರೋಪವಾಗಿ ಸಾನಿಧ್ಯದ ಬಳಿ ನಿರ್ಮಿಸಲಾಗಿರುವ ರಂಗಸ್ಥಳದಲ್ಲಿ ಕರಾವಳಿಯ ಪ್ರಸಿದ್ಧ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಕರಂಗಲ್ಪಾಡಿಯ ಶ್ರೀಮಹಾಸತಿ ಹಾಗೂ ಶ್ರೀಭಗವತಿ ಅಮ್ಮನವರ ಭಕ್ತವೃಂದದ ಪ್ರಮುಖರಾದ ನವೀನ್ ಬಿಜೈ, ಗಿರೀಶ್ ಕುಲಶೇಖರ್, ಸತ್ಯ ಪ್ರಸಾದ್ ಪೊಳಲಿ, ರಜನೀಶ್ ಬಿಜೈ, ಚೇತನ್ ಜಪ್ಪಿನಮೊಗರು, ರವಿಚಂದ್ರ ಶೆಟ್ಟಿ ಅಶೋಕ್ ನಗರ, ಕಿರಣ್‌ ಕುಮಾರ್ ಹಾಗೂ ಗಿರೀಶ್‌ ಕೊಟ್ಟಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!