ಕೊಣಾಜೆ: ನರಿಂಗಾನ ಗ್ರಾಮದ ಕಲ್ಲರಕೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಮ್ಮದ್ ಅರ್ಷದ್ (30) ಎಂಬವರು ನಿಗೂಢವಾಗಿ ನಾಪತ್ತೆಯಾಗಿದ್ದು, ಇವರ ಪತ್ತೆಗಾಗಿ ಕೊಣಾಜೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

ಮೂಲತಃ ಶಿವಮೊಗ್ಗದ ಕೋಟೆ ಗಂಗೂರು ನಿವಾಸಿಯಾದ ಮೊಹಮ್ಮದ್ ಅರ್ಷದ್ ಅವರು ಕಳೆದ ಕೆಲವು ಸಮಯದಿಂದ ಪತ್ನಿಯೊಂದಿಗೆ ನರಿಂಗಾನದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರ ಪುತ್ರಿ ಶಿವಮೊಗ್ಗದಲ್ಲಿರುವ ಪತ್ನಿಯ ತಾಯಿ ಮನೆಯಲ್ಲಿದ್ದಾಳೆ ಎನ್ನಲಾಗಿದೆ.

ಮಾಚ್ 23ರಂದು ಎಂದಿನಂತೆ ಗಾರೆ ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದಿದ್ದ ಅರ್ಷದ್, “ನಾನು ಮಗಳನ್ನು ನೋಡಲು ಶಿವಮೊಗ್ಗಕ್ಕೆ ಹೋಗಿ ಬರುತ್ತೇನೆ” ಎಂದು ಪತ್ನಿಯಲ್ಲಿ ತಿಳಿಸಿದ್ದರು. ಅದರಂತೆ ರಾತ್ರಿ 8 ಗಂಟೆಗೆ ಮನೆಯಿಂದ ಹೊರಟಿದ್ದ ಅವರು, ಶಿವಮೊಗ್ಗ ತಲುಪಿದ ಕೂಡಲೇ ಫೋನ್ ಮಾಡುವುದಾಗಿ ಹೇಳಿದ್ದರು.

ಫೋನ್ ಸ್ವಿಚ್ ಆಫ್:
ಆದರೆ, ಮಾಚ್ 24ರಂದು ಬೆಳಿಗ್ಗೆ 6 ಗಂಟೆಯಾದರೂ ಅರ್ಷದ್ ಅವರಿಂದ ಯಾವುದೇ ಕರೆ ಬಂದಿಲ್ಲ. ಆತಂಕಗೊಂಡ ಪತ್ನಿ ಅರ್ಷದ್ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ತಕ್ಷಣ ಶಿವಮೊಗ್ಗದಲ್ಲಿರುವ ಅರ್ಷದ್ ಅವರ ತಾಯಿಯ ಫೋನ್‌ಗೆ ಕರೆ ಮಾಡಿ ವಿಚಾರಿಸಿದಾಗ, ಅರ್ಷದ್ ಅವರು ಅಲ್ಲಿಗೂ ತಲುಪಿಲ್ಲ ಎಂಬ ಮಾಹಿತಿ ಲಭಿಸಿದೆ.

ಎಲ್ಲೆಡೆ ಹುಡುಕಾಡಿದರೂ ಪತಿ ಪತ್ತೆಯಾಗದ ಹಿನ್ನೆಲೆಯಲ್ಲಿ, ಪತ್ನಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಸಾರ್ವಜನಿಕರಿಗೆ ಮಾಹಿತಿ ಲಭ್ಯವಾದಲ್ಲಿ ತಿಳಿಸುವಂತೆ ಕೋರಿದ್ದಾರೆ.