ಬ್ಯಾರಿ ಜನಪದ ಮತ್ತು ವಚನ ಸಾಹಿತ್ಯ ಪ್ರಚಾರೋಪನ್ಯಾಸ ಕಾರ್ಯಕ್ರಮ

ಮಂಗಳೂರು: ಭಾಷೆ, ಸಂಸ್ಕೃತಿ, ಜನಾಂಗದ ಕುರಿತಂತೆ ನಡೆಸಲಾಗುವ ಸಂಶೋಧನೆಗಳು ನಿರಂತರವಾಗಿರಬೇಕು. ವಿಷಯಕ್ಕೆ ಸಂಬಂಧಿಸಿ ನಡೆಸಲಾಗುವ ಸಂಶೋಧನೆಗಳು ಯಾವ ಕಾರಣಕ್ಕೂ ಏಕಮುಖವಾಗಬಾರದು. ಸಂಶೋಧಕರು ಹೇಳಿದ್ದನ್ನೆಲ್ಲಾ ಒಪ್ಪಬೇಕಿಲ್ಲ.ಅದರ ಬಗ್ಗೆ ಪ್ರಶ್ನೆ, ಉಪಪ್ರಶ್ನೆಗಳನ್ನು ಎತ್ತಬೇಕು. ಆವಾಗ ಅವುಗಳ ಬಗೆಗಿನ ಜ್ಞಾನ ವಿಸ್ತಾರಗೊಳ್ಳಲಿದೆ ಎಂದು ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅಭಿಪ್ರಾಯಪಟ್ಟರು.

ಮಂಗಳೂರು ವಿವಿಯ ಬ್ಯಾರಿ ಅಧ್ಯುನ ಪೀಠ ಇದರ ವತಿಯಿಂದ ಕೊಣಾಜೆ ನಡುಪದವಿನ ಪಿಎ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಪೇಸ್ ನಾಲೇಜ್ ಸಿಟಿಯ ಮಲ್ಟಿಪರ್ಪಸ್ ಹಾಲ್‌ನಲ್ಲಿ ಮಂಗಳವಾರ ನಡೆದ ಬ್ಯಾರಿ ಜನಪದ ಮತ್ತು ವಚನ ಸಾಹಿತ್ಯ ಪ್ರಚಾರೋಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾರ ಮತ್ತು ಬಹಾರಿಯಿಂದ ಬ್ಯಾರಿ ಎಂಬ ಪದ ಉತ್ಪತ್ತಿಯಾಯಿತೋ ಎಂಬುದರ ಬಗ್ಗೆ ಇನ್ನೂ ಜಿಜ್ಞಾಸೆಯಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಯುವ ಸಮೂಹ ಮುಂದೆ ಬರಬೇಕು. ಬ್ಯಾರಿಯಲ್ಲಿ ಲಿಖಿತಕ್ಕಿಂತ ಜನಪದ ಸಾಹಿತ್ಯ ಹೆಚ್ಚಿವೆ. ಆಧುನಿಕ ತಂತ್ರಜ್ಞಾನ ಬಳಸಿ ಅವುಗಳ ದಾಖಲೀಕರಣ ಮಾಡುವ ಅಗತ್ಯವಿದೆ ಎಂದ ಡಾ. ಧನಂಜಯ ಕುಂಬ್ಳೆ ಪ್ರಾದೇಶಿಕ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಕೂಡ ಅದಿನ್ನೂ ಮುಖ್ಯವಾಹಿನಿಗೆ ಸರಿಸಮಾನವಾಗಿ ಬೆಳೆದು ಬಂದಿಲ್ಲ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುವ ಪ್ರಯತ್ನಗಳು ವಿಶ್ವಾಸ ಮೂಡಿಸುವಂತಿದೆ ಎಂದರು.

ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಿ ಬ್ಯಾರಿ ಜನಪದ ಮತ್ತು ವಚನ ಸಾಹಿತ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಝ್ ಜೆ. ಹಾಸಿಮ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪೇಸ್ ನಾಲೇಜ್ ಸಿಟಿ ಇದರ ಎಜಿಎಂ (ಕ್ಯಾಂಪಸ್) ಶರಫುದ್ದೀನ್ ಪಿ.ಕೆ., ಪೇಸ್ ಕ್ಯಾಂಪಸ್‌ನ ಸ್ಟೂಡೆಂಟ್ ಡೀನ್ ಡಾ. ಸಯ್ಯಿದ್ ಅಮೀನ್ ಅಹ್ಮದ್ ಮತ್ತು ಪಿಎ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಡಾ. ಅಬ್ದುಲ್ ಶರೀಫ್ ಭಾಗವಹಿಸಿದ್ದರು.

ವೇದಿಕೆಯಲ್ಲಿ ಬ್ಯಾರಿ ಅಧ್ಯಯನ ಪೀಠದ ಸದಸ್ಯರಾದ ಖಾಲಿದ್ ತಣ್ಣೀರುಬಾವಿ, ಹಂಝ ಮಲಾರ್, ಮೊಯಿದಿನ್ ಬಾದ್‌ಷಾ ಸಂಬಾರತೋಟ, ಅಖಿಲ ಭಾರತ ಬ್ಯಾರಿ ಪರಿಷತ್‌ನ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಉಪಸ್ಥಿತರಿದ್ದರು.

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಸ್ವಾಗತಿಸಿದರು. ಪೀಠದ ಸದಸ್ಯ ಡಾ.ಇಸ್ಮಾಯೀಲ್ ಎನ್. ವಂದಿಸಿದರು. ಕನ್ನಡ ಉಪನ್ಯಾಸಕಿ ಸಾರಾ ಮಸ್ಕರುನ್ನಿಸ ಕಾರ್ಯಕ್ರಮ ನಿರೂಪಿಸಿದರು.

error: Content is protected !!