ರಂಝಾನ್‌ಗೆ ಬಟ್ಟೆ ತರಲು ಹೋದವರು ಮರಳಿ ಬಂದಿದ್ದು ಹೆಣವಾಗಿ!: ಇಸ್ರೇಲ್ ಕ್ರೌರ್ಯಕ್ಕೆ ಬಲಿಯಾಯ್ತು ಒಂದು ಸುಂದರ ಸಂಸಾರ

ನವದೆಹಲಿ: ಪಶ್ಚಿಮ ದಂಡೆಯ ತಮ್ಮುನ್ ಗ್ರಾಮದಲ್ಲಿ ಶನಿವಾರ ನಸುಕಿನ ಜಾವ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯು ಮಾನವೀಯತೆಯನ್ನೇ ಬೆಚ್ಚಿಬೀಳಿಸಿದೆ. ಈದ್ ಹಬ್ಬದ ಸಂಭ್ರಮಕ್ಕಾಗಿ ನಾಬ್ಲಸ್‌ನಲ್ಲಿ ಶಾಪಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಅಲಿ ಖಾಲಿದ್ ಬನಿ ಓದೆಹ್ ಅವರ ಕುಟುಂಬದ ಮೇಲೆ ಇಸ್ರೇಲ್ ಪಡೆಗಳು ಅಮಾನವೀಯವಾಗಿ ಗುಂಡಿನ ಮಳೆಗರೆದಿವೆ.

ಈ ಭೀಕರ ದಾಳಿಯಲ್ಲಿ 37 ವರ್ಷದ ಅಲಿ, ಅವರ ಪತ್ನಿ ವಾದ್ (35), ಮತ್ತು ಐದು ಹಾಗೂ ಏಳು ವರ್ಷದ ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ, ಹತರಾದವರಲ್ಲಿ ಒಬ್ಬ ಬಾಲಕ ಕುರುಡು ಮತ್ತು ವಿಕಲಚೇತನನಾಗಿದ್ದರೂ ಇಸ್ರೇಲ್ ಬುಲೆಟ್‌ಗಳು ಆತನನ್ನು ಬಿಡಲಿಲ್ಲ. ಇಡೀ ಕುಟುಂಬದಲ್ಲಿ ಈಗ ಕೇವಲ 12 ವರ್ಷದ ಖಾಲಿದ್ ಮತ್ತು 8 ವರ್ಷದ ಮುಸ್ತಫಾ ಎಂಬ ಇಬ್ಬರು ಮಕ್ಕಳು ಮಾತ್ರ ಅನಾಥವಾಗಿ ಬದುಕುಳಿದಿದ್ದಾರೆ.

Mustafa Mustafa

ಘಟನೆಯ ಬಗ್ಗೆ ಕಣ್ಣೀರಿಡುತ್ತಾ ವಿವರಿಸಿದ 12 ವರ್ಷದ ಖಾಲಿದ್, “ಗುಂಡುಗಳು ಸೀಳಿ ಬಂದಾಗ ಅಮ್ಮ ಕೊನೆಯದಾಗಿ ಒಮ್ಮೆ ಕಿರುಚಿದರು, ಅಪ್ಪ ಸಾಯುವ ಮುನ್ನ ಅಲ್ಲಾಹನ ನಾಮ ಸ್ಮರಿಸಿದರು” ಎಂದು ಹೇಳುತ್ತಿರುವುದು ಕಲ್ಲೆದೆಯವರನ್ನೂ ಕರಗಿಸುವಂತಿದೆ. ಇಸ್ರೇಲ್ ಸೇನೆಯು ಈ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾ, ‘ಕಾರು ತಮ್ಮತ್ತ ವೇಗವಾಗಿ ನುಗ್ಗಿ ಬಂದಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು’ ಎಂದು ವಾದಿಸಿದೆ.

ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ಯಾವುದೇ ಎಚ್ಚರಿಕೆ ನೀಡದೆ ನೇರವಾಗಿ ಕಾರಿನ ಮೇಲೆ ಬುಲೆಟ್ ಮಳೆ ಸುರಿಸಲಾಗಿದೆ. ಕಾರಿನ ಗಾಜುಗಳು ಒಡೆದು ಚೂರಾಗಿದ್ದು, ಕಾರಿನ ಸುತ್ತ ನೂರಾರು ಗುಂಡಿನ ಚಕ್ಕೆಗಳು ಪತ್ತೆಯಾಗಿರುವುದು ಇಸ್ರೇಲ್ ಸೇನೆಯ ಅಮಾನವೀಯ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದೆ.

ಗಾಜಾದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್ ದಾಳಿಯಲ್ಲಿ ಈಗಾಗಲೇ 72,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಪುಟ್ಟ ಮಕ್ಕಳು. “ಅವರು ನಮ್ಮ ಭೂಮಿಯನ್ನು ಕಬಳಿಸುತ್ತಿದ್ದಾರೆ, ನಮ್ಮನ್ನು ಬೆದರಿಸುತ್ತಿದ್ದಾರೆ” ಎಂದು ಬದುಕುಳಿದ ಮಕ್ಕಳ ಅಜ್ಜಿ ನಜಾ ಬನಿ ಓದೆಹ್ ಆಕ್ರೋಶ ಹೊರಹಾಕಿದ್ದಾರೆ. ಹಿಂದೆ ಐದು ವರ್ಷದ ಹಿಂದ್ ರಾಜಬ್ ಎಂಬ ಬಾಲಕಿಯ ಕಾರಿನ ಮೇಲೆ 335ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿ ಕೊಂದಿದ್ದ ಇಸ್ರೇಲ್ ಸೇನೆ, ಈಗ ಮತ್ತೊಂದು ಸುಂದರ ಕುಟುಂಬದ ಕನಸನ್ನು ಬುಲೆಟ್‌ಗಳ ಮೂಲಕ ನುಚ್ಚುನೂರು ಮಾಡಿದೆ.

error: Content is protected !!