ಋತುಚಕ್ರ ರಜೆ : ಉದ್ಯೋಗದಾತರಿಗೆ ಶೋಕಾಸ್ ನೋಟಿಸ್‌ ನೀಡದಂತೆ ಹೈಕೋರ್ಟ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಭಾಗವಾಗಿ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ನೀಡಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ಮೌಖಿಕವಾಗಿ ಹೇಳಿದೆ.

ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಉದ್ಯೋಗದಾತರ ಸಂಘ, ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್‌‌‌ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಅಧಿಸೂಚನೆಯ ಮುಂದುವರಿದ ಭಾಗವಾಗಿ ಸರ್ಕಾರವು ಶೋಕಾಸ್‌ ನೋಟಿಸ್‌ ನೀಡುತ್ತಿದೆ. ಇದರಿಂದ ತಮಗೆ ಸಮಸ್ಯೆಯಾಗುತ್ತಿದೆ ಎಂದರು.

ಅದಕ್ಕೆ, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹೀಗಿರುವಾಗ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ನೀಡುತ್ತಿರುವುದೇಕೆ? ಶೋಕಾಸ್‌ ನೋಟಿಸ್‌ಗಳಿಗೆ ತಡೆ ನೀಡಬೇಕಾಗುತ್ತದೆ. ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು. ಇತ್ತ ಅರ್ಜಿಯ ಸಂಬಂಧ ವಾದ ಮಂಡಿಸಲು ಮುಂದಾಗದ ಸರ್ಕಾರವು ವಿಚಾರಣೆ ಮುಂದೂಡಿಕೆ ಕೋರುತ್ತದೆ. ಇನ್ನೊಂದೆಡೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಶೋಕಾಸ್ ನೋಟಿಸ್ ಗಳಿಗೆ ತಡೆ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿತು.

ಬೆಂಗಳೂರು ಮಹಿಳಾ ವಕೀಲರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ಸರ್ಕಾರದ ಅಧಿಸೂಚನೆಯಲ್ಲಿ ಉದ್ಯೋಗದಾತರಿಗೆ ಸಮಸ್ಯೆಯಾಗುವಂಥ ಯಾವುದೇ ಅಂಶಗಳಿಲ್ಲ. ನಮಗೆ ಇರುವ ಮಾಹಿತಿಯ ಪ್ರಕಾರ ಯಾವುದೇ ಉದ್ಯೋಗದಾತರಿಗೆ ಶೋಕಾಸ್‌ ನೋಟಿಸ್‌ ಜಾರಿಯಾಗಿಲ್ಲ. ಒಂದೊಮ್ಮೆ ಅಂಥ ಯಾವುದೇ ದಾಖಲೆ ಇದ್ದರೆ ಅರ್ಜಿದಾರರು ನ್ಯಾಯಾಲಯದ ಮುಂದೆ ಇಡಬಹುದು. ಆನಂತರ ನ್ಯಾಯಾಲಯ ನಿರ್ಧರಿಸಬಹುದು ಎಂದರು.

error: Content is protected !!