ಶಬರಿಮಲೆ ‘ಅಭಿಷೇಕದ ತುಪ್ಪ’ ವಿತರಣೆಯಲ್ಲಿ ಕೋಟಿಗಟ್ಟಲೆ ಗೋಲ್‌ಮಾಲ್: ಆಡಿಟ್ ವರದಿಯಿಂದ ಬಯಲಾದ ಅಕ್ರಮ

ಪತ್ತನಂತಿಟ್ಟ (ಕೇರಳ): ವಿಶ್ವಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅತ್ಯಂತ ಪವಿತ್ರ ಪ್ರಸಾದವಾದ ‘ಅಭಿಷೇಕದ ತುಪ್ಪ’ (ಆದಿಯ ಶಿಷ್ಟಂ ನೇಯ್) ತಯಾರಿಕೆ ಮತ್ತು ವಿತರಣೆಯಲ್ಲಿ ಭಾರಿ ಪ್ರಮಾಣದ ಆರ್ಥಿಕ ಅಕ್ರಮಗಳು ನಡೆದಿರುವುದು ಆಡಿಟ್ ವರದಿಯಿಂದ ಬಹಿರಂಗವಾಗಿದೆ. ಮಂಡಲ-ಮಕರವಿಳಕ್ಕು ಉತ್ಸವದ ಅವಧಿಯಲ್ಲಿ ಸುಮಾರು 25 ಲಕ್ಷ ರೂಪಾಯಿಗೂ ಅಧಿಕ ಹಣದ ವ್ಯತ್ಯಾಸ ಕಂಡುಬಂದಿದ್ದು, ಭಕ್ತರ ನಂಬಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ.

ಲೆಕ್ಕಕ್ಕೆ ಸಿಗದ 25 ಲಕ್ಷ ರೂಪಾಯಿ:
ಕೇರಳ ರಾಜ್ಯ ಆಡಿಟ್ ಇಲಾಖೆಯು ಮಾರ್ಚ್ 13ರಂದು ಹೈಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ವರದಿಯ ಪ್ರಕಾರ, ತುಪ್ಪದ ಪೌಚ್‌ಗಳ ಮಾರಾಟದ ಲೆಕ್ಕಾಚಾರದಲ್ಲಿ ಭಾರಿ ಅಸ್ತವ್ಯಸ್ತತೆ ಉಂಟಾಗಿದೆ. ದೇವಸ್ಥಾನದ ದಾಖಲೆಗಳ ಪ್ರಕಾರ 3.17 ಕೋಟಿ ರೂಪಾಯಿ ಜಮೆಯಾಗಿದ್ದರೂ, ವಾಸ್ತವದಲ್ಲಿ ಮಾರಾಟವಾದ ಪೌಚ್‌ಗಳ ಆಧಾರದ ಮೇಲೆ 3.42 ಕೋಟಿ ರೂಪಾಯಿ ಸಂಗ್ರಹವಾಗಬೇಕಿತ್ತು. ಅಂದರೆ, ಅಂದಾಜು 25.52 ಲಕ್ಷ ರೂಪಾಯಿಗಳ ಕೊರತೆಯು ನೇರವಾಗಿ ಅಧಿಕಾರಿಗಳ ಮತ್ತು ಮಂಡಳಿಯ ಪಾರದರ್ಶಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಶಾಲಾ ನೋಟ್‌ಬುಕ್‌ನಲ್ಲಿ ಕೋಟಿಗಳ ಲೆಕ್ಕ!:
ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಸುವ ಶಬರಿಮಲೆಯಂತಹ ಸನ್ನಿಧಿಯಲ್ಲಿ, ತುಪ್ಪದ ಪೌಚ್ ವಿತರಣೆಯ ಲೆಕ್ಕವನ್ನು ಬರೆಯಲು ಕೇವಲ ನಾಲ್ಕು ಸಾದಾ ಶಾಲಾ ನೋಟ್‌ಬುಕ್‌ಗಳನ್ನು ಬಳಸಿರುವುದು ಆಡಿಟ್ ತಂಡವನ್ನು ದಂಗುಬಡಿಸಿದೆ. ಈ ಪುಸ್ತಕಗಳಲ್ಲಿ ಅಸಂಖ್ಯಾತ ತಪ್ಪುಗಳು, ಪುಟಗಳ ಕಿತ್ತುಹಾಕುವಿಕೆ ಮತ್ತು ಅಸ್ಪಷ್ಟವಾದ ಬರವಣಿಗೆಗಳು ಕಂಡುಬಂದಿವೆ. ಯಾವುದೇ ವೈಜ್ಞಾನಿಕ ಅಳತೆಗೋಲು ಇಲ್ಲದೆ ತುಪ್ಪದ ವಿತರಣೆ ಮಾಡಿರುವುದು ಅಕ್ರಮಕ್ಕೆ ಎಡೆಮಾಡಿಕೊಟ್ಟಿದೆ ಎಂದು ವರದಿ ಬೆಟ್ಟುಮಾಡಿದೆ.

ಅಧಿಕಾರಿಗಳ ಮೌನಕ್ಕೆ ಹೈಕೋರ್ಟ್ ಕೆಂಗಣ್ಣು:
ಈ ಅಕ್ರಮದ ಕುರಿತು ಜನವರಿಯಿಂದ ಫೆಬ್ರವರಿವರೆಗೆ ನಾಲ್ಕು ಬಾರಿ ವಿವರಣೆ ಕೇಳಿದರೂ, ದೇವಸ್ವಂ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ. ಈ ಹಂತದಲ್ಲಿ ಹಸ್ತಕ್ಷೇಪ ಮಾಡಿರುವ ಕೇರಳ ಹೈಕೋರ್ಟ್, ಕೂಡಲೇ ಸಮಗ್ರ ತನಿಖೆ ನಡೆಸಿ ಪೂರ್ಣ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಮುಂದಿನ ಸೀಸನ್ ಒಳಗೆ ಸಂಪೂರ್ಣ ಡಿಜಿಟಲ್ ಲೆಕ್ಕಪತ್ರ ವ್ಯವಸ್ಥೆ ಮತ್ತು ಡಿಜಿಟಲ್ ಫ್ಲೋ ಮೀಟರ್‌ಗಳನ್ನು ಅಳವಡಿಸಲು ನ್ಯಾಯಾಲಯವು ನಿರ್ದೇಶನ ನೀಡಿದೆ.

error: Content is protected !!