ಅಮಲಿನಲ್ಲಿ ಆಟೋ ಚಾಲನೆ, ಮೂರು ಬೈಕ್‌ಗಳಿಗೆ ಡಿಕ್ಕಿ; ಯುವಕರನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು!

ಹಾಸನ: ನಗರದ ರಸ್ತೆಗಳಲ್ಲಿ ಅಮಲಿನಲ್ಲಿ ಆಟೋ ಚಲಾಯಿಸಿ ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಅಟ್ಟಹಾಸ ಮೆರೆದ ಯುವಕರನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶುಕ್ರವಾರ(ಮಾ.13) ಸಂಜೆ ನಡೆದಿದೆ.

ಹಾಸನ ನಗರದಲ್ಲಿ ನಿನ್ನೆ ಸಂಜೆ ಆಟೋವೊಂದನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಯುವಕರ ತಂಡ, ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಜನರಲ್ಲಿ ಆತಂಕ ಮೂಡಿಸಿದ್ದಾರೆ. ಈ ಯುವಕರ ಹುಚ್ಚಾಟದಿಂದಾಗಿ ಮೂರು ಬೈಕ್‌ಗಳು ಜಖಂಗೊಂಡಿದ್ದು, ನಾಲ್ವರು ಸಾರ್ವಜನಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಕರು ಗಾಂಜಾ ಅಥವಾ ಇನ್ನಾವುದೇ ಮಾದಕ ದ್ರವ್ಯ ಸೇವಿಸಿ ಆಟೋ ಚಾಲನೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಅವರ ಅಸಹಜ ನಡವಳಿಕೆಯಿಂದ ಜನರು ಬೆಚ್ಚಿಬಿದ್ದಿದ್ದರು. ಯುವಕರ ಪುಂಡಾಟಿಕೆಯಿಂದ ತಾಳ್ಮೆ ಕಳೆದುಕೊಂಡ ಸಾರ್ವಜನಿಕರು, ಆಟೋವನ್ನು ಬೆನ್ನಟ್ಟಿ ಹಿಡಿದಿದ್ದಾರೆ.

ಬಳಿಕ ಮೂವರು ಯುವಕರಿಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿ ಹಾಸನ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹಾಸನ ನಗರ ಠಾಣೆಯ ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಆಟೋವನ್ನು ಜಪ್ತಿ ಮಾಡಲಾಗಿದ್ದು, ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆಯೇ ಎಂಬ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

error: Content is protected !!