ನವದೆಹಲಿ/ಸೂರತ್: ಗುಜರಾತ್‌ನ ಸೂರತ್‌ನಲ್ಲಿ ಇಬ್ಬರು ಯುವತಿಯರು ದೇವಸ್ಥಾನದ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆಘಾತಕಾರಿ ಸತ್ಯಾಂಶವೊಂದು ಹೊರಬಿದ್ದಿದೆ. ಈ ವಿದ್ಯಾರ್ಥಿನಿಯರು ಸಾವನ್ನಪ್ಪುವ ದಾರಿ ಹುಡುಕಲು ಚಾಟ್‌ಜಿಪಿಟಿಯನ್ನು ಬಳಸಿದ್ದರು ಎನ್ನುವುದು ಬಯಲಾಗಿದೆ. ಈ ಬಗ್ಗೆ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೇವಲ ಒಂದು ಪದದಲ್ಲಿ “Yikes” (ಅಯ್ಯೋ) ಎಂದು ಪ್ರತಿಕ್ರಿಯಿಸುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.

ನಡೆದಿದ್ದೇನು?
ಕಳೆದ ಶುಕ್ರವಾರ ಕಾಲೇಜಿಗೆ ತೆರಳಿದ್ದ 18-20 ವರ್ಷ ವಯಸ್ಸಿನ ಇಬ್ಬರು ಸ್ನೇಹಿತೆಯರು ಮನೆಗೆ ಮರಳಿರಲಿಲ್ಲ. ಪೋಷಕರು ಪೊಲೀಸರಿಗೆ ದೂರು ನೀಡಿದಾಗ, ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಸೂರತ್‌ನ ಸ್ವಾಮಿನಾರಾಯಣ ದೇವಸ್ಥಾನಕ್ಕೆ ತಲುಪಿದ್ದರು. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯುವತಿಯರು ಶೌಚಾಲಯಕ್ಕೆ ಪ್ರವೇಶಿಸಿರುವುದು ಕಂಡುಬಂದಿದೆ. ಅಲ್ಲಿ ಅವರ ಮೃತದೇಹಗಳು ಪತ್ತೆಯಾಗಿದ್ದು, ಪಕ್ಕದಲ್ಲೇ ಅರಿವಳಿಕೆ ಮದ್ದು ಮತ್ತು ಸಿರಿಂಜ್‌ಗಳು ಪತ್ತೆಯಾಗಿವೆ.

ಸೂರತ್ ಎಸಿಪಿ ಎನ್.ಪಿ. ಗೋಹಿಲ್ ಈ ಬಗ್ಗೆ ಮಾಹಿತಿ ನೀಡಿ, “ಯುವತಿಯರ ಫೋನ್ ಅನ್ಲಾಕ್ ಮಾಡಿದಾಗ ಅವರ ಚಾಟ್‌ಜಿಪಿಟಿ ಸರ್ಚ್ ಹಿಸ್ಟರಿ ಕಂಡುಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಯಾವ ಔಷಧಗಳನ್ನು ಬಳಸಬಹುದು ಎಂದು ಅವರು ಅದರಲ್ಲಿ ಹುಡುಕಿದ್ದರು. ಅಷ್ಟೇ ಅಲ್ಲದೆ, ಅರಿವಳಿಕೆ ಮದ್ದು ಚುಚ್ಚಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಹಳೆಯ ಸುದ್ದಿಯ ಸ್ಕ್ರೀನ್‌ಶಾಟ್ ಕೂಡ ಅವರ ಫೋಟೋ ಗ್ಯಾಲರಿಯಲ್ಲಿತ್ತು” ಎಂದು ತಿಳಿಸಿದ್ದಾರೆ.

ಮಸ್ಕ್ ವರ್ಸಸ್ ಚಾಟ್‌ಜಿಪಿಟಿ:
ಎಲೋನ್ ಮಸ್ಕ್ ಅವರ ಈ ಪ್ರತಿಕ್ರಿಯೆ ಕೇವಲ ಅನುಕಂಪದ್ದಲ್ಲ, ಅದರ ಹಿಂದೆ ವ್ಯಾಪಾರೀ ಪೈಪೋಟಿಯೂ ಇದೆ. ಮಸ್ಕ್ ಮೊದಲಿನಿಂದಲೂ ಚಾಟ್‌ಜಿಪಿಟಿ ತಯಾರಿಕಾ ಸಂಸ್ಥೆ ‘OpenAI’ ನ ಕಟು ವಿಮರ್ಶಕರು. ಮಸ್ಕ್ ತಮ್ಮದೇ ಆದ ‘ಗ್ರಾಕ್’ ಎಐ ಹೊಂದಿದ್ದು, ಇದು ಚಾಟ್‌ಬಾಟ್ ಅನ್ನು ಹೆಚ್ಚು ಸುರಕ್ಷಿತ ಎಂದು ಬಿಂಬಿಸುತ್ತಾ ಬಂದಿದ್ದಾರೆ. “ಗ್ರಾಕ್ ಬಳಸಿದ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆದರೆ ಚಾಟ್‌ಜಿಪಿಟಿ ಬಳಸಿದವರು ಮಾಡಿಕೊಂಡಿದ್ದಾರೆ” ಎಂದು ಮಸ್ಕ್ ಹೇಳಿಕೆ ನೀಡಿದ್ದರು. ಅಲ್ಲದೆ ಚಾಟ್‌ಜಿಪಿಟಿ ʻಅತಿಯಾದ ಮುನ್ನೆಚ್ಚರಿಕೆ’ (Woke) ಹೊಂದಿದೆ ಎಂದೂ ಅವರು ಟೀಕಿಸಿದ್ದಾರೆ.
ಸದ್ಯ ಪೊಲೀಸರು ಈ ಇಬ್ಬರು ಸ್ನೇಹಿತೆಯರನ್ನು ಆತ್ಮಹತ್ಯೆಯ ಅಂಚಿಗೆ ತಳ್ಳಿದ ಕಾರಣವೇನು ಎಂಬ ಬಗ್ಗೆ ವಿಧಿವಿಜ್ಞಾನ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
