ನದಿಗೆ ಉರುಳಿದ ಬಸ್: 18 ಮಂದಿ ಸಾವು, 26 ಮಂದಿ ಗಂಭೀರವಾಗಿ ಗಾಯ

ಕಠ್ಮಂಡು: ಪೋಖರಾದಿಂದ ಕಠ್ಮಂಡುವಿಗೆ ಬರುತ್ತಿದ್ದ ಪ್ರಯಾಣಿಕ ಬಸ್ ತ್ರಿಶೂಲಿ ನದಿಗೆ ಉರುಳಿ ಬಿದ್ದು ಕನಿಷ್ಠ 18 ಜನರು ಸಾವನ್ನಪ್ಪಿದ್ದು, 26 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು(ಫೆ.23) ಬೆಳಗಿನ ಜಾವ 1.30 ಕ್ಕೆ ಕಠ್ಮಂಡುವಿನಿಂದ ಪಶ್ಚಿಮಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಪೃಥ್ವಿ ಹೆದ್ದಾರಿಯಲ್ಲಿ ಸಂಭವಿಸಿದೆ.

ಅಪಘಾತ ಸ್ಥಳದಿಂದ 18 ಶವಗಳನ್ನು ಹೊರತೆಗೆಯಲಾಗಿದ್ದು, ಬಸ್ ನಿಂದ 28 ಮಂದಿ ಗಾಯಾಳು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ನೇಪಾಳ ಸಶಸ್ತ್ರ ಪೊಲೀಸ್ ಪಡೆ ವಕ್ತಾರ ಬಿಷ್ಣು ಪ್ರಸಾದ್ ಭಟ್ಟ ತಿಳಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ನ್ಯೂಜಿಲೆಂಡ್‌ನ ಪುರುಷ ಪ್ರಯಾಣಿಕರೊಬ್ಬರು ಸೇರಿದ್ದಾರೆ. ಗಾಯಗೊಂಡವರಲ್ಲಿ ಜಪಾನಿನ ಮಹಿಳೆ ಮತ್ತು ಡಚ್ ಪ್ರಜೆಯೊಬ್ಬರು ಸೇರಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಅತಿ ವೇಗದ ಚಾಲನೆಯೇ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್‌ನಲ್ಲಿ ಕೆಲವು ವಿದೇಶಿ ಪ್ರವಾಸಿಗರು ಸೇರಿದಂತೆ ಸುಮಾರು 40 ರಿಂದ 45 ಪ್ರಯಾಣಿಕರಿದ್ದರು.

ಬಸ್ ಪೃಥ್ವಿ ಹೆದ್ದಾರಿಯಲ್ಲಿ ಚಲಿಸುತ್ತಿತ್ತು. ಬೇನಿಘಾಟ್ ರೋರಾಂಗ್ ಗ್ರಾಮೀಣ ಪುರಸಭೆ -5 ರ ಭೈಸೆಪತಿ ಪ್ರದೇಶದ ಬಳಿ ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದೆ ಎಂದು ವರದಿಯಾಗಿದೆ. ವಾಹನವು ರಸ್ತೆಯಿಂದ ಜಾರಿ, ಸುಮಾರು 300 ಮೀಟರ್ ಇಳಿಜಾರಿನಲ್ಲಿ ಉರುಳಿ ನದಿಯ ದಡದಲ್ಲಿ ಬಿದ್ದಿದೆ. ಬಸ್ ತೀವ್ರವಾಗಿ ಹಾನಿಗೊಳಗಾಗಿದೆ.

ಅಪಘಾತದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ, ನೇಪಾಳ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

error: Content is protected !!