ಮಂಗಳೂರು: ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರೈಸಿರುವ ಮಂಗಳೂರಿನ ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಐಎಂಎಸ್‌ಸಿ), ತನ್ನ 400ನೇ ಐಎಂಎಸ್‌ಸಿ ಆಫ್‌ರೋಡ್ ಟ್ರೋಫಿ-2026 ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಮಾ. 28 ಮತ್ತು 29ರಂದು ನಗರದ ಗಂಜಿಮಠದ ಒಡ್ಡೂರು ಫಾರ್ಮ್‌ನಲ್ಲಿ ಆಯೋಜಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಎಂಎಸ್‌ಸಿ ಅಧ್ಯಕ್ಷ ಮೂಸಾ ಶರೀಫ್ ಈ ಕುರಿತು ಮಾಹಿತಿ ನೀಡಿದರು. “ಸಣ್ಣ ಮಟ್ಟದಲ್ಲಿ ಆರಂಭವಾದ ನಮ್ಮ ಸಂಸ್ಥೆ ಇಂದು 400ನೇ ಸ್ಪರ್ಧೆಯ ಹಂತ ತಲುಪಿರುವುದು ತಂಡದ ಸಮರ್ಪಣೆಗೆ ಸಾಕ್ಷಿ. ಒಡ್ಡೂರು ಫಾರ್ಮ್‌ನ ಸವಾಲಿನ ಭೂಭಾಗವು ಚಾಲಕರ ಮತ್ತು ವಾಹನಗಳ ನೈಜ ಸಾಮರ್ಥ್ಯಕ್ಕೆ ಒರೆಹಚ್ಚಲಿದೆ ಎಂದು ಅವರು ತಿಳಿಸಿದರು.

15 ಲಕ್ಷ ರೂ. ನಗದು ಬಹುಮಾನ:
ಎರಡು ದಿನಗಳ ಈ ರೋಚಕ ಸ್ಪರ್ಧೆಯಲ್ಲಿ ಮಹಿಳಾ ವಿಭಾಗ, ಜೂನಿಯರ್, ಮಾಸ್ಟರ್ಸ್, ಜಿಮ್ಮಿ, ಥಾರ್ 2020, ಎಸ್‌ಯುವಿ, ಸ್ಟಾಕ್ ಪೆಟ್ರೋಲ್/ಡೀಸೆಲ್ ಸೇರಿದಂತೆ ಒಟ್ಟು 11 ವಿಭಾಗಗಳಲ್ಲಿ ಪೈಪೋಟಿ ನಡೆಯಲಿದೆ. ವಿಜೇತರಿಗೆ ಒಟ್ಟು 15 ಲಕ್ಷ ರೂ.ಗಳ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಮಾ. 28ರಂದು ವಿವಿಧ ವಿಭಾಗಗಳ ಪ್ರಾಥಮಿಕ ಸ್ಪರ್ಧೆಗಳು ಹಾಗೂ ಮಾ. 29ರಂದು ಮಾಡಿಫೈಡ್ ಮತ್ತು ಓಪನ್ ಕ್ಲಾಸ್ ವಿಭಾಗಗಳ ಅಂತಿಮ ಹಂತದ ಸ್ಪರ್ಧೆಗಳು ಜರುಗಲಿವೆ ಎಂದರು.

400ಕ್ಕೂ ಹೆಚ್ಚು ಸ್ಪರ್ಧಾಳುಗಳ ನಿರೀಕ್ಷೆ:
ರ‌್ಯಾಲಿಯ ನಿರ್ದೇಶಕ ಅಶ್ವಿನ್ ನಾಯ್ಕ್ ಮಾತನಾಡಿ, “ಈ ಬಾರಿ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಂದ 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ಸಾಧ್ಯತೆ ಇದೆ,” ಎಂದರು. ಕಳೆದ 25 ವರ್ಷಗಳಲ್ಲಿ ಐಎಂಎಸ್‌ಸಿ ದೇಶಾದ್ಯಂತ ರ‌್ಯಾಲಿ, ಆಟೋಕ್ರಾಸ್, ಮೋಟೋಕ್ರಾಸ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಅತ್ಯಂತ ಸುರಕ್ಷಿತವಾಗಿ ಸಂಘಟಿಸುತ್ತಾ ಬಂದಿದೆ. ಮಹೀಂದ್ರಾ ಅಡ್ವೆಂಚರ್ ಸಂಸ್ಥೆಯ ಅಧಿಕೃತ ಆಯೋಜಕರಾಗಿ ಈಗಾಗಲೇ 250ಕ್ಕೂ ಹೆಚ್ಚು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 7483291473 / 9448485868 ಅಥವಾ imscmotorsport@gmail.com ಸಂಪರ್ಕಿಸಲು ಕೋರಲಾಗಿದೆ.