ಮಂಗಳೂರು: ಭಾರತವನ್ನು 2047ರ ವೇಳೆಗೆ ಇಂಗಾಲ ಮುಕ್ತ (Carbon Neutral) ರಾಷ್ಟ್ರವನ್ನಾಗಿ ಮಾಡುವ ಐತಿಹಾಸಿಕ ಗುರಿಯೊಂದಿಗೆ, ಇಟಲಿ ಮೂಲದ ಪ್ರತಿಷ್ಠಿತ ಎಂಐಆರ್ (MIR) ಸಮೂಹ ಆಯೋಜಿಸಿದ್ದ “MIR Net Zero Vision 2047” ಮಹಾ ಶೃಂಗಸಭೆಯು ಫೆಬ್ರವರಿ 20ರಂದು ನಗರದ ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ಹಿನ್ನೆಲೆಯಲ್ಲಿ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಿತಿಕ್ ರತ್ನಾಕರ್ ಅವರು ಮಂಗಳೂರಿನ ಎಂಎಸ್‌ಇಜೆಡ್ (MSEZ) ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ವಿಶ್ವದರ್ಜೆಯ ಉತ್ಪಾದನಾ ಘಟಕದ ಕುರಿತು ಸಮಗ್ರ ಮಾಹಿತಿ ನೀಡಿದರು.
ಭಾರತವು ಮುಂದಿನ ದಶಕಗಳಲ್ಲಿ ಸುಮಾರು 400 ಮಿಲಿಯನ್ ಹೊಸ ನಗರ ನಾಗರಿಕರನ್ನು ಹೊಂದಲಿದ್ದು, ಪ್ರಸ್ತುತ ಶೇ. 40ರಷ್ಟು ಇಂಗಾಲ ಹೊರಸೂಸುವಿಕೆಗೆ ಕಾರಣವಾಗುತ್ತಿರುವ ಕಟ್ಟಡಗಳ ನಿರ್ಮಾಣ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ಈ ಶೃಂಗಸಭೆಯ ಮುಖ್ಯ ಉದ್ದೇಶವಾಗಿತ್ತು. ಮಂಗಳೂರು ನಗರವು ತನ್ನ ಆಯಕಟ್ಟಿನ ಬಂದರು ಸೌಲಭ್ಯ ಹಾಗೂ ಎನ್.ಐ.ಟಿ.ಕೆ (NITK), ಮಣಿಪಾಲ, ನಿಟ್ಟೆ ಮತ್ತು ಯೆನೆಪೋಯಾದಂತಹ ಬಲಿಷ್ಠ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಬೆಂಬಲದಿಂದಾಗಿ ಅಂತರಾಷ್ಟ್ರೀಯ ತಂತ್ರಜ್ಞಾನ ವರ್ಗಾವಣೆಗೆ ಜಾಗತಿಕ ಮಟ್ಟದ ಸೂಕ್ತ ಸ್ಥಳವಾಗಿದೆ. ಈ ಯೋಜನೆಯ ಅಡಿಯಲ್ಲಿ ವಿದ್ಯುತ್ ತಯಾರಿಸುವ ಅತ್ಯಾಧುನಿಕ ಬಿಐಪಿವಿ (BIPV) ಫೇಸಡ್‌ಗಳು, ಸುರಕ್ಷಿತ ಸೋಡಿಯಂ-ಐಯಾನ್ ಬ್ಯಾಟರಿಗಳು, ಸ್ಮಾರ್ಟ್ ಎನರ್ಜಿ ಸ್ಟೋರೇಜ್ ವ್ಯವಸ್ಥೆ ಹಾಗೂ ಶಬ್ದ ಮಾಲಿನ್ಯ ತಡೆಯುವ ಪೂರ್ವನಿರ್ಮಿತ ಅಕೌಸ್ಟಿಕ್ ಗೋಡೆಗಳನ್ನು ಮಂಗಳೂರಿನ ಘಟಕದಲ್ಲೇ ಉತ್ಪಾದಿಸಲು ಸಂಸ್ಥೆ ನಿರ್ಧರಿಸಿದೆ ಎಂದು ನಿತಿಕ್ ರತ್ನಾಕರ್ ಮಾಹಿತಿ ನೀಡಿದರು.

ಈ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶ್ರೀಪಾದ್ ನಾಯ್ಕ್, ರಾಜ್ಯ ಸಚಿವ ಕೆ.ಜೆ. ಜಾರ್ಜ್, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.

ಅಂತಾರಾಷ್ಟ್ರೀಯ ತಜ್ಞರಾದ ಎಂಐಆರ್ ಗ್ರೂಪ್ ಸಿಇಒ ಆರ್ಕಿಟೆಕ್ಟ್ ರಾಫೆಲೆ ಮರಾಝೋ, ನಾರ್ಬರ್ಟ್ ಲ್ಯಾಂಟ್ಸ್‌ಚ್ನರ್ ಮತ್ತು ಜಿಯಾಂಡೊಮೆನಿಕೊ ಮಿಲಾನೊ ಅವರು ಸುಸ್ಥಿರ ನಗರಗಳ ವಿನ್ಯಾಸದ ಕುರಿತು ತಾಂತ್ರಿಕ ಮಾರ್ಗದರ್ಶನ, ಪ್ರಾತ್ಯಕ್ಷಿಕೆ ನೀಡಿದರು. ಇಟಲಿಯ ವಾಸ್ತುಶಿಲ್ಪದ ಪರಿಣತಿ ಹಾಗೂ ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಒಗ್ಗೂಡಿಸುವ ಈ ಜಂಟಿ ಪ್ರಯತ್ನವು ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (PSU) ಹೊಸ ದಾರಿಯನ್ನು ತೋರಿಸಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಐಆರ್ ಗ್ರೂಪ್‌ನ ಪ್ರಮುಖರಾದ ಇಮ್ಮಾನುಯೆಲ್ ಪಿನಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
