1.20 ಕೋಟಿ ರೂ. ವಂಚನೆ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ಶೇರು ಮಾರುಕಟ್ಟೆ ಹಾಗೂ ಕರೆನ್ಸಿ ಟ್ರೆಡಿಂಗ್‌ನಲ್ಲಿ ಭಾರಿ ಲಾಭಾಂಶದ ಆಮಿಷವೊಡ್ಡಿ ಸಾರ್ವಜನಿಕರಿಗೆ ಸುಮಾರು 1.20 ಕೋಟಿ ರೂಪಾಯಿ ವಂಚಿಸಿ, ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ವಿಶ್ವನಿಧಂ ಲೇಔಟ್ ನಿವಾಸಿ ಅಜಯ್ ಪ್ರಸಾದ್ ಜಿ (41) ಬಂಧಿತ ಆರೋಪಿ. ಈತನ ವಿರುದ್ಧ 2011ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು ವಂಚನೆ ಪ್ರಕರಣಗಳು ದಾಖಲಾಗಿದ್ದವು.

ಆರೋಪಿಯು ʻನ್ಯಾನೋ ಫಾರೆಕ್ಸ್ ಇಂಡಿಯಾ’ (Nano Forex India) ಎಂಬ ಸಂಸ್ಥೆಯನ್ನು ಕಟ್ಟಿಕೊಂಡು, ತನ್ನಲ್ಲಿರುವ ʻಫಾರೆಕ್ಸ್ ರೋಬೋಟ್ ಸಾಫ್ಟ್‌ವೇರ್’ ಮೂಲಕ ವ್ಯವಹಾರ ನಡೆಸಿದರೆ ತಿಂಗಳಿಗೆ ಶೇ. 40ರಷ್ಟು ಲಾಭ ಹಾಗೂ ಶೇ. 20ರಷ್ಟು ಹೂಡಿಕೆ ಮರುಪಾವತಿ ಮಾಡುವುದಾಗಿ ಸಾರ್ವಜನಿಕರನ್ನು ನಂಬಿಸಿದ್ದ. ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ನಕಲಿ ಐಡಿ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ನೀಡುತ್ತಿದ್ದ ಈತ, ಹಲವರಿಂದ ಹಂತ ಹಂತವಾಗಿ 1.20 ಕೋಟಿ ರೂ. ಸಂಗ್ರಹಿಸಿ ಬಳಿಕ ಲಾಭಾಂಶ ನೀಡದೆ ಹಣವನ್ನು ದುರುಪಯೋಗಪಡಿಸಿಕೊಂಡು ನಾಪತ್ತೆಯಾಗಿದ್ದ.

ಕಳೆದ 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಾರಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಅಜಯ್ ಪ್ರಸಾದ್‌ನನ್ನು ಪತ್ತೆ ಹಚ್ಚಲು ಉಳ್ಳಾಲ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಖಚಿತ ಮಾಹಿತಿ ಮೇರೆಗೆ ಫೆಬ್ರವರಿ 20, 2026 ರಂದು ಬೆಂಗಳೂರಿನಲ್ಲಿ ಆತನನ್ನು ದಸ್ತಗಿರಿ ಮಾಡಲಾಗಿದೆ.

ಬಂಧಿತನನ್ನು ಮಂಗಳೂರಿನ 7ನೇ ಜೆ.ಎಂ.ಎಫ್.ಸಿ (JMFC) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಅತಿಯಾದ ಲಾಭದ ಆಮಿಷವೊಡ್ಡುವ ಇಂತಹ ಅನಧಿಕೃತ ಸಾಫ್ಟ್‌ವೇರ್ ಹಾಗೂ ಟ್ರೇಡಿಂಗ್ ಸಂಸ್ಥೆಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದಿರಬೇಕು ಮತ್ತು ಯಾವುದೇ ಹೂಡಿಕೆ ಮಾಡುವ ಮೊದಲು ಕಾನೂನುಬದ್ಧತೆಯನ್ನು ಪರಿಶೀಲಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

error: Content is protected !!