ಮಂಗಳೂರು: ರಾಜಕಾರಣದಲ್ಲಿ ಒಂದು ಮಾತಿದೆ, “ಯಾವುದನ್ನ ಮಾಡಬೇಡಿ ಅಂತೀರೋ, ಜನ ಅದನ್ನೇ ಮೊದಲು ಮಾಡ್ತಾರೆ!” ಈಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ʻಕೇರಳ ಸ್ಟೋರಿ-2′ ಸಿನಿಮಾದ ವಿಚಾರದಲ್ಲಿ ಮಾಡಿದ್ದು ಕೂಡ ಇದನ್ನೇ. ಸಿನಿಮಾ ಬಿಡುಗಡೆಗೂ ಮುನ್ನವೇ “ಇದು ವಿಷಕಾರಿ ಸಿನಿಮಾ, ಇದನ್ನ ಬಹಿಷ್ಕರಿಸಿ” ಅಂತ ಕರೆ ಕೊಡುವ ಮೂಲಕ ಪಿಣರಾಯಿ ಅವರು ಸದ್ದಿಲ್ಲದೆ ಈ ಸಿನಿಮಾಗೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಪಬ್ಲಿಸಿಟಿಯನ್ನು ಪುಕ್ಕಟೆಯಾಗಿ ಕೊಟ್ಟುಬಿಟ್ಟಿದ್ದಾರೆ! ʻಕೇರಳ ಸ್ಟೋರಿ-1′ ಕೂಡ ಇಂತಹಾ ಬಹಿಷ್ಕಾರ, ವಿವಾದಗಳಿಂದಲೇ ಗಲ್ಲಾ ಪೆಟ್ಟಿಗೆ ತುಂಬಿಸಿಕೊಂಡಿತ್ತು!

ಸಿನಿಮಾ ಮಾರುಕಟ್ಟೆಯ ಗುಟ್ಟು ಗೊತ್ತಿರುವವರಿಗೆ ಗೊತ್ತು, ವಿವಾದ ಅಂದ್ರೆ ಅಲ್ಲಿ ಗೆಲುವು ಅಂತ. ಪಿಣರಾಯಿ ವಿಜಯನ್ ಅವರು ಯಾವಾಗ “ಬಹಿಷ್ಕರಿಸಿ” ಅಂದರೋ, ಅಲ್ಲಿಯವರೆಗೆ ಈ ಸಿನಿಮಾದ ಬಗ್ಗೆ ಗೊತ್ತಿಲ್ಲದವರು ಕೂಡ ಈಗ ಗೂಗಲ್‌ನಲ್ಲಿ ಸರ್ಚ್ ಮಾಡಲು ಶುರು ಮಾಡಿದ್ದಾರೆ. “ಅಷ್ಟಕ್ಕೂ ಪಿಣರಾಯಿ ಅವರು ಅಷ್ಟೊಂದು ಹೆದರುತ್ತಿರೋದು ಏನನ್ನು ತೋರಿಸಿದ್ದಾರೆ ಈ ಸಿನಿಮಾದಲ್ಲಿ?” ಎನ್ನುವ ಕುತೂಹಲ ಈಗ ಹಳ್ಳಿ ಹಳ್ಳಿಗೂ ತಲುಪಿದೆ.

ಬಿಜೆಪಿಗೆ ಸಿಕ್ಕ ಅಸ್ತ್ರ:
ಪಿಣರಾಯಿ ಅವರ ಈ ನಡೆ ಬಿಜೆಪಿಗೆ ಕೈಗೆ ಬಂದ ತುತ್ತಿನಂತಾಗಿದೆ. “ನೋಡಿ, ಇವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡ್ತಾರೆ, ಆದ್ರೆ ತಮಗೆ ಇಷ್ಟವಾಗದ ಸಿನಿಮಾವನ್ನು ಜನ ನೋಡಬಾರದು ಅಂತಾರೆ” ಎಂದು ಬಿಜೆಪಿ ಈಗ ಪಿಣರಾಯಿ ಅವರನ್ನೇ ಗುರಿಯಾಗಿಸಿಕೊಂಡಿದೆ. ಸಿಎಂ ಅವರು ಬಹಿಷ್ಕಾರದ ಮಾತಾಡಿದಷ್ಟು ಸಿನಿಮಾದ ಟಿಕೆಟ್‌ಗಳು ಅಡ್ವಾನ್ಸ್ ಬುಕ್ಕಿಂಗ್ ಆಗುವ ಸಾಧ್ಯತೆ ದಟ್ಟವಾಗಿದೆ.
ಇತ್ತ ಕಣ್ಣೂರು ಮೂಲದ ಶ್ರೀದೇವ್ ನಂಬೂದಿರಿ ಕೋರ್ಟ್ ಮೆಟ್ಟಿಲೇರಿದ್ದನ್ನೇ ಸಿನಿಮಾ ತಂಡ ತಮಗೆ ಸಿಕ್ಕ ಪಬ್ಲಿಸಿಟಿ ಅಂತ ಸಂಭ್ರಮಿಸುತ್ತಿದೆ. ಫೆಬ್ರವರಿ 24ರ ಕೋರ್ಟ್ ವಿಚಾರಣೆಯ ದಿನ ಇಡೀ ದೇಶದ ಕಣ್ಣು ಕೇರಳದ ಮೇಲಿರುತ್ತದೆ. ಸೆನ್ಸಾರ್ ಮಂಡಳಿ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ, ಪಿಣರಾಯಿ ಅವರ ಈ ಬಹಿಷ್ಕಾರದ ಅಸ್ತ್ರ ಅಕ್ಷರಶಃ ಸಿನಿಮಾದ ಪಾಲಿಗೆ ‘ಬೂಸ್ಟರ್ ಡೋಸ್’ ಆಗಿದೆ!
ಪಿಣರಾಯಿ ವಿಜಯನ್ ಅವರು ಸಿನಿಮಾದ ಗತಿಗೆ ಬ್ರೇಕ್ ಹಾಕಲು ಹೋದರೋ ಅಥವಾ ತಿಳಿಯದೆಯೇ ಅದಕ್ಕೆ ಎಕ್ಸಿಲರೇಟರ್ ಒತ್ತಿದರೋ ಗೊತ್ತಿಲ್ಲ. ಆದರೆ ಒಂದು ಮಾತ್ರ ನಿಜ, ʻಕೇರಳ ಸ್ಟೋರಿ-2′ ಈಗ ಕೇವಲ ಸಿನಿಮಾ ಆಗಿ ಉಳಿದಿಲ್ಲ; ಅದು ಪಿಣರಾಯಿ ವರ್ಸಸ್ ಬಿಜೆಪಿ ನಡುವಿನ ಅಹಂನ ಹೋರಾಟವಾಗಿ ಬದಲಾಗಿದೆ. ಸಿನಿಮಾದ ಪ್ರಮೋಷನ್‌ಗೆ ಖರ್ಚು ಮಾಡಬೇಕಿದ್ದ ಹಣ ಈಗ ಪಿಣರಾಯಿ ಅವರ ಒಂದೇ ಒಂದು ಹೇಳಿಕೆಯಿಂದ ಉಳಿದಂತಾಗಿದೆ!