ರಸ್ತೆ ದಾಟುತ್ತಿದ್ದ ಬ್ಯಾಂಕ್ ಉದ್ಯೋಗಿಗೆ ಬೈಕ್ ಡಿಕ್ಕಿ; ಯುವತಿ ಸಾ*ವು

ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಖಾಸಗಿ ಬ್ಯಾಂಕ್‌ನ ಮಹಿಳಾ ಉದ್ಯೋಗಿ ಮೃತಪಟ್ಟಿರುವ ಘಟನೆ ರಾಜಾಜಿನಗರದ ಡಾ. ರಾಜ್‌ ಕುಮಾರ್‌ ರಸ್ತೆಯಲ್ಲಿ ನಡೆದಿದೆ.

ಲಗ್ಗೆರೆ ಸಮೀಪದ ಕೆಂಪೇಗೌಡ ಲೇಔಟ್‌ ನಿವಾಸಿ ಯೋಗೇಶ್ವರಿ(27) ಮೃತ ಯುವತಿ. ಬೈಕ್‌ ಸವಾರ ದೀಪಕ್‌ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಯೋಗೇಶ್ವರಿ ಸುಮಾರು ವರ್ಷಗಳಿಂದ ರಾಜ್‌ ಕುಮಾರ್‌ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್‌ನ ಉದ್ಯೋಗಿಯಾಗಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ಯಾಂಕ್‌ ಸಮೀಪದಲ್ಲೇ ಇದ್ದ ಕ್ಯಾಂಟೀನ್‌ವೊಂದರಿಂದ ಊಟ ತೆಗೆದುಕೊಂಡು ಬರಲು ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಅತೀ ವೇಗವಾಗಿ ಬಂದ ಬೈಕ್‌ ಸವಾರ, ನಿಯಂತ್ರಣ ತಪ್ಪಿ ಯೋಗೇಶ್ವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದ ಯೋಗೇಶ್ವರಿ ತಲೆ ಹಾಗೂ ಎದೆ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಯುವತಿ ರಸ್ತೆ ದಾಟುತ್ತಿರುವಾಗ ವೇಗದಲ್ಲಿ ಬಂದ ಬೈಕ್‌ ಸವಾರ ಯುವತಿಗೆ ಡಿಕ್ಕಿ ಹೊಡೆದಿರುವುದು ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ರಾಜ್‌ಕುಮಾರ್‌ ರಸ್ತೆಯ ಖಾಸಗಿ ಬ್ಯಾಂಕ್‌ ಮುಂಭಾಗ ಘಟನೆ ನಡೆದಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!