ಮಹಾರಾಷ್ಟ್ರದ ಗಡ್ಚಿರೋಲಿ ಅಂದರೆ ಬರೀ ಕಾಡಲ್ಲ, ಅದು ಸಾವಿನ ಮನೆ. ಅಂತಹ ದಟ್ಟಾರಣ್ಯದೊಳಗೆ ಕಳೆದ ಮೂರು ದಿನಗಳಿಂದ ಸಾವು-ಬದುಕಿನ ನಡುವೆ ಒಂದು ಭೀಕರ ಆಟ ನಡೆಯುತ್ತಿತ್ತು. ಅದರ ಕ್ಲೈಮ್ಯಾಕ್ಸ್ ಹೇಗಿತ್ತೆಂದರೆ, ಇಡೀ ನಕ್ಸಲ್ ಲೋಕ ಒಮ್ಮೆ ನಡುಗಿ ಹೋಗಿದೆ.

ಅವನ ಹೆಸರು ಪ್ರಭಾಕರ್ ಅಲಿಯಾಸ್ ಲೋಕೇಟಿ ಚಂದರ್ ರಾವ್. ತೆಲಂಗಾಣದ ಈ ಕುಖ್ಯಾತ ನಕ್ಸಲ್ ಲೀಡರ್ ತಲೆಗೆ ಸರ್ಕಾರ ಇಟ್ಟಿದ್ದ ಬೆಲೆ ಬರೋಬ್ಬರಿ ಇಪ್ಪತ್ತೈದು ಲಕ್ಷ ರೂಪಾಯಿ! ಹತ್ತಾರು ದಾಳಿಗಳು, ನೂರಾರು ಸಂಚುಗಳು.. ಇವನ ಹೆಸರೇಳಿದರೆ ಗಡಿ ಭಾಗದ ಪೊಲೀಸರಿಗೆ ನಿದ್ದೆ ಬರುತ್ತಿರಲಿಲ್ಲ. ಅಂಥವನನ್ನು ಇಂದು ಸಿ-60 ಕಮಾಂಡೋಗಳು ಮಣ್ಣು ಮುಕ್ಕಿಸಿದ್ದಾರೆ.

ನಡೆದಿದ್ದೇನು?
ನಾರಾಯಣಪುರ-ಗಡ್ಚಿರೋಲಿ ಗಡಿಯ ಆ ಫೋಡೆವಾಡಾ ಗ್ರಾಮದ ಸುತ್ತಮುತ್ತ ಯಮನ ಪಾದದ ಸದ್ದು ಕೇಳುತ್ತಿತ್ತು. ಗಡ್ಚಿರೋಲಿ ಪೊಲೀಸರ ‘ಡೆಡ್ಲಿ’ ಪಡೆ C-60 ನ ಹದಿನಾಲ್ಕು ತಂಡಗಳು ಜೇನುಗೂಡಿಗೆ ಕೈ ಹಾಕಿದ್ದವು. ಆ ದಟ್ಟ ಕಾಡಿನ ಮೌನವನ್ನು ಸೀಳಿಕೊಂಡು ಗುಂಡುಗಳು ಹಾರತೊಡಗಿದವು. ನಕ್ಸಲರು ಎಕೆ-47 ಹಿಡಿದು ಗುಟುರು ಹಾಕುತ್ತಿದ್ದರೆ, ಇತ್ತ ಕಮಾಂಡೋಗಳು ʻಸರ್ಜಿಕಲ್’ ಸ್ಟ್ರೈಕ್‌ನಂತೆ ಮುನ್ನುಗ್ಗುತ್ತಿದ್ದರು.

ಕೊನೆಗೆ ಸಿಕ್ಕಿದ್ದು ಉರುಳಿದ್ದು ಏಳು ಹೆಣಗಳು! ಅದರಲ್ಲಿ ಮೂವರು ಹೆಣ್ಣು ನಕ್ಸಲರು. ಪ್ರಭಾಕರ್ ತನ್ನ ಎಕೆ-47 ಹಿಡಿದು ಹೋರಾಡುತ್ತಲೇ ಕಾಡಿನ ಮಣ್ಣಲ್ಲಿ ಮಣ್ಣಾಗಿ ಹೋದ. ಜೊತೆಗೆ ಮೂರು ಎಕೆ-47, ಒಂದು ಎಸ್‌ಎಲ್‌ಆರ್ ಮತ್ತು ಹಳೆಯ .303 ರೈಫಲ್‌ಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಅಂದಹಾಗೆ, ಇದು ಕೇವಲ ಒಂದು ಎನ್‌ಕೌಂಟರ್ ಅಲ್ಲ; ಇದು ವರ್ಷಗಳಿಂದ ಸುಡುತ್ತಿದ್ದ ದ್ವೇಷದ ಕಿಚ್ಚು. ಪ್ರಭಾಕರ್ ಎಂಬ ಮಾಸ್ಟರ್ ಮೈಂಡ್ ಇಲ್ಲದೆ ನಕ್ಸಲ್ ಸಂಘಟನೆ ಈಗ ದಿಕ್ಕಿಲ್ಲದ ಹಡಗಿನಂತಾಗಿದೆ.

ಗಡ್ಚಿರೋಲಿಯ ಆ ರಕ್ತಸಿಕ್ತ ಮಣ್ಣಿನಲ್ಲಿ ಇನ್ನೂ ಶೋಧ ನಡೆಯುತ್ತಿದೆ. ಬಾಕಿ ಉಳಿದಿರುವ ನಕ್ಸಲರು ಎಲ್ಲಿ ಅಡಗಿದ್ದಾರೆ? ಈ ಆಟ ಎಲ್ಲಿಗೆ ನಿಲ್ಲುತ್ತೆ? ಗೊತ್ತಿಲ್ಲ. ಆದರೆ ಒಂದು ಮಾತ್ರ ಸತ್ಯ, ಪ್ರಭಾಕರ್ ಎಂಬ ಕ್ರೂರ ಅಧ್ಯಾಯಕ್ಕಂತೂ ಈಗ ಶುಭಂ ಹಾಡಲಾಗಿದೆ.
