
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ಮೆಟ್ರೋ ರೈಲಿನ ಟಿಕೆಟ್ ದರದಲ್ಲಿ ಮತ್ತೆ ಶೇ.5ರಷ್ಟು ಅಂದರೆ ಕನಿಷ್ಠ 1 ರೂ.ನಿಂದ ಗರಿಷ್ಠ 5 ರೂ. ವರೆಗೆ ದರ ಏರಿಕೆ ಮಾಡಿದೆ. ಬರುವ ಸೋಮವಾರದಿಂದ (ಫೆ.9 ರಿಂದ) ನೂತನ ದರ ಅಧಿಕೃತವಾಗಿ ಜಾರಿಗೆ ಬರಲಿದೆ.

ಟಕೆಟ್ ದರ ಏರಿಕೆ ಮಾಡಿ ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿರುವ ಬಿಎಂಆರ್‌ಸಿಎಲ್ ಕ್ರಮಕ್ಕೆ ಜನರಿಂದ ವ್ಯಾಪಕ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರ್ವಜನಿಕ ಸಾರಿಗೆಯನ್ನು ಪದೇ ಪದೇ ಏರಿಕೆ ಮಾಡಿ ಜನರಿಗೆ ಜೇಬಿಗೆ ಕತ್ತರಿ ಹಾಕುವ ನಿರ್ಧಾರ ಅವೈಜ್ಞಾನಿಕ ಹಾಗೂ ಖಂಡನೀಯ. ಯಾವುದೇ ಕಾರಣಕ್ಕೂ ದರ ಏರಿಕೆ ಮಾಡಬಾರದು. ಜನರ ವಿರೋಧದ ನಡುವೆಯೂ ಟಿಕೆಟ್ ದರ ಹೆಚ್ಚಳ ಮಾಡಿದರೆ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಶೇ.55ರಷ್ಟು ದರ ಹೆಚ್ಚಳ ಮಾಡಿ, ಇದೀಗ ಸೋಮವಾರದಿಂದ ಮತ್ತೆ ದರದಲ್ಲಿ ಶೇ.5 ರಷ್ಟು ಏರಿಕೆ ಜಾರಿಗೆ ಬರಲಿದೆ ಎಂದು ಘೋಷಿಸಿದೆ. 96.10 ಕಿ.ಮೀ.ಗಳ ಸಂಪೂರ್ಣ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ರೂ.1 ಮತ್ತು ಗರಿಷ್ಠ ರೂ.5 ರಷ್ಟು ಅಲ್ಪ ಹೆಚ್ಚಳ ಮಾಡಲಾಗಿದೆ.

ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರದ ಸಚಿವಾಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿ ಇದ್ದರೂ ತೀರ್ಮಾನ ಮಾಡುವುದು ಅವರೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮೆಟ್ರೋ ಪ್ರಯಾಣ ದರ ನಿರ್ಧಾ ರದಲ್ಲಿ ಕೇವಲ ರಾಜ್ಯ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಪಾತ್ರವೂ ಇರುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ದೇಶದಲ್ಲೇ ಅತ್ಯಂತ ದುಬಾರಿ ಎನಿಸಿಕೊಂಡಿರುವ ಬೆಂಗಳೂರು ನಮ್ಮ ಮೆಟ್ರೋ ಇದೀಗ ಮತ್ತೆ ದರ ಏರಿಕೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ಮನವಿ ಮಾಡಿದ್ದಾರೆ.