ಈರುಳ್ಳಿ ದರ ಡಿಢೀರ್‌ ಕುಸಿತ: ಮಾರಾಟವಿಲ್ಲದೆ ರೈತರ ಪರದಾಟ

ರಾಯಚೂರು: ಈರುಳ್ಳಿ ದರ ನೆಲಕಚ್ಚಿದ್ದು, ಎಪಿಎಂಸಿಯಲ್ಲಿ ಖರೀದಿಗೆ ಯಾವುದೇ ವರ್ತಕರು ಮುಂದಾಗುತ್ತಿಲ್ಲವೆಂದು ರೈತರು ಕಂಗಾಲಾಗಿದ್ದಾರೆ.

ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ 750 ರೂ.ದಿಂದ ಗರಿಷ್ಠ 1400 ರೂ. ದರವಿದ್ದು, 1000 ದಿಂದ 1100 ರೂ.ಗೆ ಖರೀದಿಯಾಗುತ್ತಿದೆ.


ರಾಯಚೂರು ಮಾರುಕಟ್ಟೆಗೆ ಪ್ರತಿದಿನ ಹೆಚ್ಚು ಕಡಿಮೆ 800ರಿಂದ 1000 ಕ್ವಿಂಟಲ್ ಈರುಳ್ಳಿ ಆವಕವಾಗುತ್ತಿದೆ. ಎಕರೆಗೆ ಏನಿಲ್ಲವೆಂದರೂ 40 ರಿಂದ 50 ಸಾವಿರ ರೂ. ಖರ್ಚು ಮಾಡಬೇಕಿದ್ದು, ಕನಿಷ್ಠ 50 ಕ್ವಿಂಟಲ್ ಇಳುವರಿ ಬರುತ್ತದೆ. ಆದರೆ ಈಗಿರುವ ದರಕ್ಕೆ ಈರುಳ್ಳಿ ಮಾರಾಟ ಮಾಡಿದರೆ ಖರ್ಚು ಮಾಡಿದ ಹಣ ಕೂಡ ಕೈಗೆ ಬರುವುದಿಲ್ಲ. ಸಿಕ್ಕ ದರಕ್ಕೆ ಮಾರಾಟ ಮಾಡಬೇಕೆಂದರೂ ಖರೀದಿದಾರರು ಬರುತ್ತಿಲ್ಲವೆಂದು ರೈತರು ಗೋಳಾಡುತ್ತಿದ್ದಾರೆ.

ರೈತರಿಂದ ಉತ್ಪನ್ನ ಖರೀದಿಸುವ ವರ್ತಕರು ಹೈದರಾಬಾದ್ ಸೇರಿದಂತೆ ಬೇರೆ ಬೇರೆ ಕಡೆ ರಫ್ತು ಮಾಡುತ್ತಾರೆ. ಆದರೆ, ಬೇಡಿಕೆಯೇ ಬರುತ್ತಿಲ್ಲ. ಹೀಗಾಗಿ ದಯವಿಟ್ಟು ಯಾರೂ ಎಪಿಎಂಸಿಗೆ ಈರುಳ್ಳಿ ತರಬೇಡಿ ಎಂದು ವರ್ತಕರೇ ಹೇಳುತ್ತಿದ್ದಾರೆ.

error: Content is protected !!