
ಹೈದರಾಬಾದ್: ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತನಾಗಿದ್ದ ವ್ಯಕ್ತಿಯೊಂದಿಗೆ ವಿವಾಹವಾಗುವುದನ್ನು ವಿರೋಧಿಸಿದ ಹೆತ್ತ ತಂದೆ- ತಾಯಿಯನ್ನೇ ಅರಿವಳಿಕೆ(Anesthesia) ಚುಚ್ಚುಮದ್ದು ನೀಡಿ ಕೊಲೆ ಮಾಡಿ ಜೈಲು ಪಾಲಾದ ಘಟನೆ ನಡೆದಿದೆ.

ಆರೋಪಿ ಬಿ. ಸುರೇಖಾ ಹೆತ್ತವರನ್ನೇ ಕೊಂದ ಪಾಪಿ ಮಗಳು.
ಸುರೇಖಾ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ಅರಿವಳಿಕೆ ಔಷಧಿಗಳನ್ನು ಕದ್ದು ಮನೆಗೆ ಬಂದಿದ್ದಳು. ಅದೇ ದಿನ ರಾತ್ರಿ, ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದ ತನ್ನ ತಾಯಿ ಲಕ್ಷ್ಮೀ ಗೆ ನಿದ್ರೆ ಮಾಡಲು ಇಂಜೆಕ್ಷನ್ ನೀಡುವುದಾಗಿ ಹೇಳಿದ್ದಳು. ಮಗಳನ್ನು ನಂಬಿ ಲಕ್ಷ್ಮೀ ಒಪ್ಪಿಕೊಂಡಿದ್ದರು. ನಂತರ, ಅವಳ ತಂದೆ ದಶರಥ್ ಮನೆಗೆ ಹಿಂದಿರುಗಿದಾಗ, ಕೃಷಿ ಕೆಲಸದಿಂದ ದಣಿದಿದ್ದೀರಿ ಎಂದು ಅದೇ ನಿದ್ರಾಜನಕವನ್ನು ಚುಚ್ಚಿದ್ದಾಳೆ. ಇಬ್ಬರೂ ಹೈ ಡೋಸ್ ನಿಂದಾಗಿ ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

ಆಕೆಯ ಸಹೋದರ ಅಶೋಕ್ ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಅನುಮಾನಗೊಂಡ ಅಶೋಕ್ ನೀಡಿದ ದೂರಿನ ಆಧಾರದ ಮೇಲೆ, ಧಾರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಆರಂಭದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು, ಆದರೆ ಮರಣೋತ್ತರ ಪರೀಕ್ಷೆಯ ವರದಿಗಳು ನಿದ್ರಾಜನಕದ ಹೈ ಡೋಸ್ ನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿವೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಪಿ ಶ್ರೀನಿವಾಸ್ ರೆಡ್ಡಿ, ಧರೂರ್ ಪೊಲೀಸರು ಒಂದೇ ದಿನದೊಳಗೆ ಜೋಡಿ ಕೊಲೆಯನ್ನು ಭೇದಿಸಿದ್ದಾರೆ ಎಂದು ತಿಳಿಸಿದ್ದಾರೆ. ತನಿಖೆಯಿಂದ ಸುರೇಖಾ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿ ಆತನನ್ನು ಮದುವೆಯಾಗಲು ಬಯಸಿದ್ದಳು. ಆಕೆಯ ಪೋಷಕರು ಆಕ್ಷೇಪಿಸಿದಾಗ, ಆಕೆ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಳು” ಎಂದು ತಿಳಿಸಿದ್ದಾರೆ.