ಪರಶುರಾಮ ಥೀಮ್ ಪಾರ್ಕ್‌ ಸುರಕ್ಷತೆಗೆ ಜಿಲ್ಲಾಧಿಕಾರಿ ನಿರ್ಮಿತಿ ಕೇಂದ್ರಕ್ಕೆ ಖಡಕ್ ಆದೇಶ

ಕಾರ್ಕಳ: ವಿವಾದ ಹಾಗೂ ತನಿಖೆಯ ಸುಳಿಯಲ್ಲಿರುವ ಬೈಲೂರು ಉಮಿಕಲ್ ಕುಂಜದ ಪರಶುರಾಮ ಥೀಮ್ ಪಾರ್ಕ್‌ನ ಸ್ವಚ್ಛತೆ, ಸುರಕ್ಷತೆ ಜವಾಬ್ದಾರಿ ನಿರ್ವಹಿಸಲು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ನಿರ್ಮಿತಿ ಕೇಂದ್ರಕ್ಕೆ ಖಡಕ್ ಸೂಚನೆ ನೀಡಿದ್ದಾರೆ.

 

ಥೀಮ್ ಪಾರ್ಕ್ ಕಾಮಗಾರಿ ಇನ್ನೂ ಪೂರ್ಣಗೊಂಡು ಹಸ್ತಾಂತರವಾಗದ ಕಾರಣ, ಅಲ್ಲಿನ ಬೆಲೆಬಾಳುವ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸಾಮಗ್ರಿಗಳನ್ನು ರಕ್ಷಿಸುವ ಹೊಣೆಗಾರಿಕೆ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ರದ್ದೇ ಆಗಿದೆ. ಪಾರ್ಕ್ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಡಿಸಿ ಸ್ಪಷ್ಟನೆ ನೀಡಿದ್ದಾರೆ.

ಆವರಣದ ಪೊದೆಗಳನ್ನು ತಕ್ಷಣ ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಸ್ವಚ್ಛತೆಗೆ ಮುಂದಾಗುವುದು ಸೂಕ್ತವಲ್ಲದ ಕಾರಣ ಇಲಾಖಾವತಿಯಿಂದಲೇ ಕಾರ್ಯ ನಡೆಸಲು ತೀರ್ಮಾನಿಸಲಾಗಿದ್ದು, ಕೈಗೊಂಡ ಕ್ರಮಗಳ ಬಗ್ಗೆ ಜನವರಿ 10ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು. ಅಲ್ಲದೆ, ಪ್ರತಿ ವಾರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಜಿಪಿಎಸ್ ಫೋಟೋದೊಂದಿಗೆ ವರದಿ ನೀಡಲು ಆದೇಶಿಸಲಾಗಿದೆ.

ಜ. 14ರಿಂದ ಒಂದು ತಿಂಗಳ ಕಾಲ ಪಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಸ್ಥಳೀಯ ಶಾಸಕರು ಕೋರಿದ್ದರು. ಆದರೆ, ಪ್ರಕರಣ ಸಿಐಡಿ ತನಿಖೆಯಲ್ಲಿರುವುದು ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಪಾರ್ಕ್‌ನ ಸುರಕ್ಷತೆಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತನಿಖೆ ನಡೆಯುತ್ತಿರುವುದರಿಂದ ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಯಾರಾದರೂ ಅತಿಕ್ರಮ ಪ್ರವೇಶ ಮಾಡಿದರೆ ಅವರ ವಿರುದ್ಧ ಹೊಸ ಕಾಯ್ದೆಯಾದ BNSS 2023 ರಡಿ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ.

error: Content is protected !!