ಮಂಗಳೂರು: ಉಡುಪಿ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಮಂಗಳೂರು ನಗರ ಭೇಟಿಯ ಕಾರ್ಯಕ್ರಮದ ಕುರಿತು ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎಂಬಿ ಪುರಾಣಿಕ್ ಹಾಗೂ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಅವರು ತಿಳಿಸಿದಂತೆ, ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಪೂಜ್ಯ ಶ್ರೀಪಾದರು ಜ.4ರ ಭಾನುವಾರ ಸಂಜೆ 4 ಗಂಟೆಗೆ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರಪ್ರವೇಶ ಮಾಡಲಿದ್ದು, ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು ಸ್ವಾಗತ ಸಮಿತಿ ಹಾಗೂ ಭಕ್ತ ಸಮೂಹದ ವತಿಯಿಂದ ಪೂರ್ಣಕುಂಭ ಸಹಿತ ಭವ್ಯ ಸ್ವಾಗತ ನಡೆಯಲಿದೆ.

ಜ.4ರಿಂದ ಜ.8ರ ತನಕ ಪೂಜ್ಯ ಶ್ರೀಪಾದರು ಮಂಗಳೂರಿನ ವಿವಿಧ ಭಕ್ತಾದಿಗಳ ಮನೆಗಳಿಗೆ ಭೇಟಿ ನೀಡಿ, ಹಲವು ದೇವಸ್ಥಾನಗಳಲ್ಲಿ ದರ್ಶನ ಪಡೆದು, ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಪರ್ಯಾಯ ರಾಯಸವನ್ನು ಭಕ್ತರಿಗೆ ನೀಡಲಿದ್ದಾರೆ. ಜ.8ರ ಗುರುವಾರ ಸಂಜೆ 4 ಗಂಟೆಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯ ಮೆರವಣಿಗೆಯೊಂದಿಗೆ ಕೊಡಿಯಾಲ್ ಬೈಲ್ ಶಾರದ ವಿದ್ಯಾಲಯದ ಹೊರಾಂಗಣ ವೇದಿಕೆಗೆ ಆಗಮಿಸಿ ಮಂಗಳೂರಿನ ಜನತೆಯ ಪರವಾಗಿ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ ಎಂದು ವಿವರಿಸಿದರು.

ಶೀರೂರು ಶ್ರೀಪಾದರ ನಗರ ಸಂಚಾರ ಸಂದರ್ಭದಲ್ಲಿ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಲು ಇಚ್ಛಿಸುವ ಭಕ್ತರು ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ (ಮೊ. 9448546051) ಅಥವಾ ಪ್ರಧಾನ ಸಂಚಾಲಕ ಗುರುಪ್ರಸಾದ್ ಕಡಂಬಾರ್ (ಮೊ. 9380999424) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಪ್ರಧಾನ ಸಂಚಾಲಕರು ಗುರುಪ್ರಸಾದ್ ಕಡಂಬಾರ್, ಕೋಶಾಧಿಕಾರಿ ಬಿ. ಸುಬ್ರಮಣ್ಯ ರಾವ್ ಉಪಸ್ಥಿತರಿದ್ದರು.
