ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ದಾಂಧಲೆ: ಸಿಬ್ಬಂದಿಗೆ ಹಲ್ಲೆ, ಲಾರಿ ಚಾಲಕ-ಕ್ಲೀನರ್ ಬಂಧನ

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಹಣ ಪಾವತಿಸಲು ನಿರಾಕರಿಸಿ, ಟೋಲ್ ಸಿಬ್ಬಂದಿಗೆ ಹಲ್ಲೆಗೈದು ದಾಂಧಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್ (23) ಮತ್ತು ಲಾರಿಯಲ್ಲಿದ್ದ ಕ್ಲೀನರ್ ತೇಜಸ್ (26) ಪ್ರಕರಣದ ಆರೋಪಿಗಳು.

ಪ್ರಕರಣದ ದೂರುದಾರರಾದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ. (25) ಅವರ ದೂರಿನಂತೆ, ಅವರು ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಇನ್‌ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಿನಾಂಕ 29-12-2025ರ ಮುಂಜಾನೆ ಕೆಎ-18-ಸಿ-3048 ನೊಂದಣಿಯ ಟಾಟಾ ಲಾರಿಯೊಂದು ಟೋಲ್ ಗೇಟ್ ಬಳಿ ರಸ್ತೆ ವಿರುದ್ಧ ದಿಕ್ಕಿನಿಂದ ಆಗಮಿಸಿದೆ.

ಟೋಲ್ ಸಿಬ್ಬಂದಿ ಟೋಲ್ ಹಣವನ್ನು ಕೇಳಿದಾಗ, ಲಾರಿ ಚಾಲಕ ಹಣ ನೀಡಲು ನಿರಾಕರಿಸಿ ವಾಹನವನ್ನು ಮುಂದಕ್ಕೆ ಚಲಾಯಿಸಿ ಟೋಲ್ ಗೇಟ್‌ಗೆ ಹಾನಿ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಲಾರಿ ಚಾಲಕ ಹಾಗೂ ಇನ್ನೋರ್ವ ಆರೋಪಿಯು ಟೋಲ್ ಸಿಬ್ಬಂದಿ ಅಂಕಿತ್ ಮತ್ತು ರೋಹಿತ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.

ಇದಲ್ಲದೆ, ಮತ್ತೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರನ್ನು ಕರೆದುಕೊಂಡು ಬಂದು, ಟೋಲ್ ಬೂತ್ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಟೋಲ್ ಸಿಬ್ಬಂದಿಗೆ ಪುನಃ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 154/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 329(3), 351(2), 352, 115(2), 118(1), 324(2) ಓದು 3(5) ಹಾಗೂ ಐಎಂವಿ ಕಾಯ್ದೆಯ ಕಲಂ 184(E) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!