ಮಂಗಳೂರು: ಉಳ್ಳಾಲ ರಾಣಿ ಅಬ್ಬಕ್ಕ ಬಂದು ಹೋಗುತ್ತಿದ್ದ ಜಾಗ ಮಣೇಲ್. ಉಳ್ಳಾಲದಲ್ಲಿ ಅಬ್ಬಕ್ಕನ ಕುರಿತಂತೆ ಒಂದಲ್ಲ ಒಂದು ರೀತಿಯ ಕಾರ್ಯಕ್ರಮಗಳು ನಡೆಯುತ್ತಿದೆ. ಅದೇ ರೀತಿ ಮಣೇಲ್‌ನಲ್ಲಿಯೂ ಅಬ್ಬಕ್ಕನ ಬದುಕನ್ನು ಚಿತ್ರಿಸುವ ಕೆಲಸ ಅಗತ್ಯವಾಗಿ ನಡೆಯಬೇಕಿದೆ. ಮಣೇಲನ್ನು ಅಬ್ಬಕ್ಕ ಹೆಸರಿನಲ್ಲಿ ಸಾಂಸ್ಕೃತಿಕ ಗ್ರಾಮವನ್ನಾಗಿ ರೂಪಿಸುವ ತುರ್ತು ಕೆಲಸ ಆಗಬೇಕಿದ್ದು ಅದರ ಸ್ವರೂಪದ ಬಗ್ಗೆ ಚರ್ಚೆ ನಡೆಸಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ವಿದ್ವಾಂಸ ಡಾ.ಕೆ. ಚಿನ್ನಪ್ಪ ಗೌಡ ಒತ್ತಾಯಿಸಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಳಲಿ ಮತ್ತು ರಾಣಿ ಅಬ್ಬಕ್ಕ ಚಾವಡಿ ಮಣೆಲ್ ಇವರ ಸಂಯುಕ್ತ ಆಶ್ರಯದಲ್ಲಿ ಮಳಲಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜರಗಿದ “ಮನೆಲ್ದ ಪೆರ್ಮೆ ರಾಣಿ ಅಬ್ಬಕ್ಕ” ವಿಷಯದ ಕುರಿತ ವಿಚಾರಕೂಟ ಉದ್ಘಾಟಿಸಿ ಮಾತನಾಡಿದರು.

ಮಾತು ಮುಂದುವರಿಸಿದ ಚಿನ್ನಪ್ಪ ಗೌಡರು, ಕಾರ್ಯಕ್ರಗಳು ಇಲ್ಲಿ ಗ್ರಾಮೋತ್ಸವದ ರೀತಿ ಆಗಬೇಕು. ಇಟಲಿ ಪ್ರವಾಸಿ ಪಿಯಾತ್ರೋ ಡಲ್ಲಾವಲ್ಲೆ ಮಣೇಲ್‌ಗೆ ಬಂದು ರಾಣಿಯನ್ನು ಭೇಟಿಯಾಗಿ ತನ್ನ ಕಥನದಲ್ಲಿ ಚಿತ್ರಿಸಿದ್ದಾನೆ. ಸಾಮಾನ್ಯ ಮಹಿಳೆಯಂತೆ ಸರಳವಾಗಿ ಬದುಕುತ್ತಿದ್ದ ಅಬ್ಬಕ್ಕನನ್ನು ನೆನಪಿಸಲು ಆಕೆಯ ಹೆಸಲ್ಲಿ ಸಂತೆ, ಚಿತ್ರ, ಕರಕುಶಲ, ಗ್ರಾಮೀಣ, ಕಲೋತ್ಸವ, ರಂಗೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಡೆಯಬೇಕಿದೆ. ಯಾಕೆಂದರೆ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಹೆಸರಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳು ನಡೆಯುತ್ತಿದೆ. ಅದೇ ರೀತಿ ಅಬ್ಬಕ್ಕನ ಹೆಸರಲ್ಲೂ ನಡೆಯಬೇಕಿದೆ. ಅಬ್ಬಕ್ಕನ ಜೀವನ ಕಥನ ಅಧ್ಯಯನ ಮಾಡಿ, ಇದನ್ನು ಆಧರಿಸಿ ಚಿತ್ರ ಬಿಡಿಸಿ ಮಳಲಿ ಶಾಲೆಯನ್ನು ಕಲಾಶಾಲೆ ಮಾಡಬೇಕು. ತನ್ನ ಗಂಡ, ರಾಜ್ಯದ ಬೆಂಬಲವಿಲ್ಲದೆ ಊರವರ ಸಹಕಾರದಿಂದ ಪೋರ್ಚುಗೀಸರಂತಹಾ ಬಲಾಢ್ಯ ಸೇನೆಯೊಂದಿಗೆ ಹೋರಾಡಿ ಗೆದ್ದ ಅಬ್ಬಕ್ಕ
‘ಬ್ರೇವ್ ಹಾರ್ಟ್ ಆಫ್ ಇಂಡಿಯಾ’ ಪುಸ್ತಕದಲ್ಲಿ 13 ಮಂದಿಯ ಹೋರಾಟಗಾರ ಪೈಕಿ ಆರು ಮಂದಿಯಲ್ಲಿ ಮೊದಲ ಹೆಸರು ರಾಣಿ ಅಬ್ಬಕ್ಕಯದ್ದು. ಆಕೆಯ ರಾಜಕೀಯ ಹೋರಾಟ ಮಾತ್ರವಲ್ಲ ಮನುಷ್ಯ ಪ್ರೀತಿ, ಅಂತರ್ಜಾತೀಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದ ಅತ್ಯಂತ ವಿವೇಕಶೀಲ ಮಹಿಳೆಯ ಚಿತ್ರಣ ಮಣೇಲ್‌ನಲ್ಲಿ ಅಗತ್ಯವಾಗಿ ನಡೆಯಬೇಕಿದೆ. ಆಕೆಯ ಹೋರಾಟದ ಹಿಂದಿನ ಸಂದೇಶಗಳೇನು? ರಾಜತಾಂತ್ರಿಕ, ಸ್ಥಳೀಯ ಬದುಕು ಹೇಗಿತ್ತು ಎನ್ನುವ ಚಿತ್ರಣ ಸಿಗಬೇಕಿದೆ.ರಾಣಿ ಅಬ್ಬಕ್ಕನ ಸೈನ್ಯದಲ್ಲಿ ಮುಸ್ಲಿಮರೂ ಇದ್ದರು. ಮಣೇಲ್ ಸಂಸ್ಕೃತಿ, ಸಹಬಾಳೆ, ಕೋಮು ಸೌಹಾರ್ದ, ಬಹುತ್ವದ ಗ್ರಾಮ. ಇಲ್ಲಿ ಆಕೆಯ ಹೆಸರಲ್ಲಿ ಚಿತ್ರಶಾಲೆ, ರಂಗಶಾಲೆ ಆದರೆ ತುಳು ಸಾಹಿತ್ಯ ಅಕಾಡೆಮಿ ಕೆಲಸಕ್ಕೆ ಅರ್ಥ ಬರುತ್ತದೆ. ರಾಣಿ ಅಬ್ಬಕ್ಕ ನೌಕಾ ವಿಹಾರವನ್ನೂ ಆರಂಭಿಸಬಹುದು ಎಂದು ಚಿನ್ನಪ್ಪ ಗೌಡ ಅಭಿಪ್ರಾಯಿಸಿದರು.

‘ಅಬ್ಬಕ್ಕ ಚಾರಿತ್ರಿಕ ಅವಲೋಕನ’ ಕುರಿತು ವಿಮರ್ಶಿಸಿದ
ಬಂಟ್ವಾಳ ತುಳು ಅಧ್ಯಯನ ಕೇಂದ್ರ ಬಂಟ್ವಾಳದ ಅಧ್ಯಕ್ಷ ಡಾ. ತುಕರಾಮ ಪೂಜಾರಿ, ಅಬ್ಬಕ್ಕ ರಾಣಿಯ ಇತಿಹಾಸ, ಹೋರಾಟ ಹೇಗಿತ್ತು, ಅತ್ಯಂತ ಕ್ರೂರಿಗಳು, ಬಲಾಢ್ಯರು ಆಗಿದ್ದ ಪೋರ್ಚ್ಗೀಸರ ವಿರುದ್ದ ಹೋರಾಡಿ ಅವರನ್ನು ಸೋಲಿಸಿದ ರೀತಿಯನ್ನು ಮನೋಜ್ಞವಾಗಿ ನಿರೂಪಿಸಿದರು. ಇತಿಹಾಸದಲ್ಲಿ ಐದು ಮಂದಿ ಅಬ್ಬಕ್ಕರ ಉಲ್ಲೇಖಗಳು ಬರುತ್ತವೆ. ಅದರಲ್ಲಿ ಇಬ್ಬರು ಅಬ್ಬಕ್ಕರು ಪೋರ್ಚುಗೀಸರ ವಿರುದ್ದ ಹೋರಾಡಿದ್ದಳು. ಅಬ್ಬಕ್ಕನ ತಾಯಿ ಕೂಡ ಪೋರ್ಚ್‌ಗೀಸರ ವಿರುದ್ದ ಹೋರಾಡಿ ಕಪ್ಪವನ್ನು ನಿಲ್ಲಿಸಿದ್ದಳು. ಅದೇ ಹಾದಿಯಲ್ಲಿ ಮಗಳು ಕೂಡಾ ಸಾಗಿ ಪೋರ್ಚಗೀಸರನ್ನು ಸೋಲಿಸಿದ್ದಳು. ಈ ಸುದ್ದಿ ಪಾಶ್ಚಿಮಾತ್ಯ, ಪರ್ಷಿಯಾ, ರೋಮ್ ವರೆಗೂ ತಲುಪುತ್ತದೆ. ಹಾಗಾಗಿಯೇ ಇಟಲಿ ಪ್ರವಾಸಿ ಪರ್ಷಿಯಾ ದೊರೆಯ ಮಾತುಕೇಳಿ ಅಬ್ಬಕ್ಕನ್ನು ಭೇಟಿಯಾಗಲು ಮಣೇಲ್ ಗೆ ಬಂದಿದ್ದ. ಹಾಗಾಗಿ ಎರಡೂ ಅಬ್ಬಕ್ಕರಿಗೂ ಪ್ರಾಮುಖ್ಯತೆ ಸಿಗಬೇಕು. ಹಾಗೂ ಇತಿಹಾಸದಲ್ಲಿ ಅಬ್ಬಕ್ಕನ ಹೆಸರಲ್ಲಿ ಗೊಂದಲ ನಿವಾರಣೆಯಾಗಬೇಕು. ಅಬ್ಬಕ್ಕನ ಕುರುಹುಗಳನ್ನು ಜತನದಂತೆ ಕಾಪಿಡಬೇಕು ಎಂದು ಅಭಿಪ್ರಾಯಿಸಿದರು.

ನಿವೃತ್ತ ಉಪನ್ಯಾಸಕ, ಇತಿಹಾಸ ತಜ್ಞ ಪುಂಡಿಕಾಯ ಗಣಪಯ್ಯ ಭಟ್ ಅವರು ‘ಅಬ್ಬಕ್ಕನ ಭೇಟಿ ಮಾಡಿದ ಪ್ರವಾಸಿ’ ಬಗ್ಗೆ ಮಾತನಾಡಿ, ಇಟಲಿ ಪ್ರವಾಸಿ ಪಿಯಾತ್ರೋ ಡಲ್ಲಾವಲ್ಲೆ ಮಣೆಲ್‌ನಲ್ಲಿ ಮೂರು ದಿನ ಇದ್ದು ಅಬ್ಬಕ್ಕನ ಭೇಟಿ ಮಾಡಿದ ವಿಷಯವನ್ನು ನಿರೂಪಿಸಿದರು.
ಉಳ್ಳಾಲದ ರಾಣಿ ಅಬ್ಬಕ್ಕ ಹೊಸ ದಿನ ಪುತ್ತಿಗೆ, ಮೂಡಬಿದ್ರೆ, ಉಳ್ಳಾಲಕ್ಕೆ ಸೀಮಿತ ಗೊಳಿಸದೆ ಮಣೇಲ ಗೇ ಸೇರಿದವಳು ಎಂಬ ಚಿಂತನೆ ಕಡಿಮೆ. ಮಣೇಲ್ ಹೇಗಿತ್ತು, ಅಬ್ಬಕ್ಕನ ಅರಮನೆ, ಆಕೆಯ ವ್ಯಕ್ತಿತ್ವ, ರೂಪ,ಮಾನವೀಯ ಮೌಲ್ಯದ ಬಗ್ಗೆ ಡಲ್ಲಾವಲ್ಲೆ ಕಥನದಲ್ಲಿ ಮನೋಜ್ಞವಾಗಿ ವಿವರಿಸಿದ್ದಾನೆ.
ಅಬ್ಬಕ್ಕನ ಉಳ್ಳಾಲದ ಅರಮನೆಗೆ ಬಂದಿದ್ದ ಡಲ್ಲಾವಲ್ಲೆಗೆ ಅಬ್ಬಕ್ಕ ಸಿಗಲಿಲ್ಲ. ಆಕೆ ಮಣೇಲ್‌ನಲ್ಲಿ ಇದ್ದ ವಿಷಯ ತಿಳಿದು ಇಲ್ಲಿಗೆ ಗುರುಪುರ ಹೊಳೆಯಲ್ಲಿ ದೋಣಿ ಮೂಲಕ ಬಂದು ಮಣೆಲ್‌ನಲ್ಲಿ ಮೂರು ದಿನ ಇದ್ದ. ನರ್ಸು ಎಂಬ ಬ್ರಾಹ್ಮಣ ದ್ವಿಭಾಷಿ ಇದ್ದ. ಅಬ್ಬಕ್ಕ ಗದ್ದೆ ಕೆಲಸಕ್ಕೆ ಹೋಗುವುದನ್ನು ಡಲ್ಲಾವಲ್ಲೆ ನೇರವಾಗಿ ಕಂಡಿದ್ದ. ಮೂರು ದಿನ ಇದ್ದರೂ ಅಬ್ಬಕ್ಕ ಅವನಿಗೆ ಭೇಟಿಗೆ ಸಿಗಲಿಲ್ಲ. ಕೊನೆಗೆ ಅಬ್ಬಕ್ಕನ ಮಗ ಅವನನ್ನು ಅರಮನೆಗೆ ಕರೆಸಿ ಊಟ ಮಾಡಿಸಿದ್ದ. ಸಾಮಾನ್ಯ ಪೋಷಾಕಿನಲ್ಲಿದ್ದ ಅಬ್ಬಕ್ಕನ ಕಂಡು ಡಲ್ಲಾವಲ್ಲೆ ಬೆರಗಾಗಿದ್ದ ಎಂದು ವಿವರಿಸಿದರು. ಎಲ್ಲಿಯ ರೋಂ ಎಲ್ಲಿಯ ಮಣೇಲ್? ಅವಳನ್ನು ನೋಡಲು ಡಲ್ಲಾವಲ್ಲೆ ಇಲ್ಲಿಯವರೆಗೂ ಬಂದಿದ್ದ ಎಂದರೆ ಅಬ್ಬಕ್ಕನ ಜನಪ್ರಿಯತೆ ಎಷ್ಟಿರಬಹುದು? ಬಹುಶಃ ಆತ ಎರಡನೇ ಅಬ್ಬಕ್ಕನ್ನು ಭೇಟಿಯಾಗಿದ್ದಿರಬಹುದು ಎಂದು ಅಭಿಪ್ರಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾರಾನಾಥ ಗಟ್ಟಿ, ರಾಣಿ ಅಬ್ಬಕ್ಕರ ನೆನಪನ್ನು ಉಳ್ಳಾಲಕ್ಕೆ ಮಾತ್ರ ಸೀಮಿತಗೊಳಿಸದೆ ಮಣೇಲ್‌ನ ಸಾಂಸ್ಕೃತಿಕ ಭೂಮಿಕೆಗೆ ಸಮಾನ ಮಹತ್ವ ನೀಡಬೇಕು ಎಂದರು. ಮಳಲಿ ಶಾಲೆಯ ಶತಮಾನೋತ್ಸವ ಇತಿಹಾಸವನ್ನು ಪುಸ್ತಕ ರೂಪದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಮೂಲಕ ಪ್ರಕಟಿಸುವುದಾಗಿ ತಿಳಿಸಿದರು. ರಾಣಿ ಅಬ್ಬಕ್ಕರ ಹೆಸರಲ್ಲಿ ಗ್ರಂಥಾಲಯ, ಚಿತ್ರಗ್ಯಾಲರಿ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುನ್ನ ಅಬ್ಬಕ್ಕನ ಅರಮನೆ ಇದ್ದ, ಕಟ್ಟೆಮಾರ್‌ನಿಂದ ಮಳಲಿ ಶಾಲೆಯವರೆಗೆ ಮೆರವಣಿಗೆ ನಡೆಯಿತು.

ವಿಶ್ರಾಂತ ಪ್ರಾಂಶುಪಾಲ ಅಕ್ಷಯ ಕುಮಾರ್ ಮಳಲಿ ನಿರೂಪಿಸಿದರು. ಶಿಕ್ಷಕ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಮಳಲಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ಅತಿಥಿಗಳ ಪರಿಚಯಿಸಿದರು. ಗ್ರಾ.ಪಂ. ಸದಸ್ಯೆ ಸಾರಮ್ಮ, ಹಿರಿಯ ಚಿತ್ರ ಕಲಾವಿದ ಗಣೇಶ್ ಸೋಮಯಾಜಿ, ಗಂಜಿಮಠ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಪ್ರಶಾಂತ್ ಕುಮಾರ್ ಕಟ್ಟೆಮಾರ್, ಗುಣಪಾಲ ಮೇಂಡ, ಸೀತಾರಾಮ ಪೂಜಾರಿ, ಉದಯ ಕುಮಾರ್ ಆಳ್ವಾ ಉಳಿಪಾಡಿಗುತ್ತು, ತುಳು ಪರಿಷತ್, ಅಧ್ಯಕ್ಷ ಶುಭೋದಯ ಆಳ್ವಾ, ಅಕಾಡೆಮಿ ಸದಸ್ಯ ಬಾಬು ಪಾಂಗಾಳ ಹಾಗೂ ಅಕ್ಷಯ ಆರ್ ಶೆಟ್ಟಿ, ನಿವೃತ್ತ ಶಿಕ್ಷಕ ವಿಠಲ ಪೂಜಾರಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಪುರಂದರ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ತುಳುಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಣೇಲ್ ಧನ್ಯವಾದ ಸಮರ್ಪಿಸಿದರು.