ಧರ್ಮಸ್ಥಳದ ಪ್ರಕರಣಗಳ SIT ತನಿಖೆಗೆ ವೇಗ ನೀಡುವಂತೆ ಮಹಿಳಾ ಸಂಘಟನೆಗಳ ಆಗ್ರಹ
ಮಂಗಳೂರು: ಧರ್ಮಸ್ಥಳ ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ, ಹತ್ಯೆ, ಅಸಹಜ ಸಾವುಗಳು ಮತ್ತು ನಾಪತ್ತೆ ಪ್ರಕರಣಗಳ ಸತ್ಯ ಹೊರತರುವಂತೆ SIT ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮಹಿಳಾ ಹಕ್ಕು ಸಂಘಟನೆಗಳು ಒತ್ತಾಯಿಸಿವೆ. ಈ ಪರವಾಗಿ ಡಿಸೆಂಬರ್ 16ರಂದು ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ’ ಮತ್ತು ‘ಮಹಿಳಾ ನ್ಯಾಯ ಸಮಾವೇಶ’ವನ್ನು ಆಯೋಜಿಸಲಾಗಿದೆ.

ಶುಕ್ರವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಮುಖ್ಯಸ್ಥೆ ಜ್ಯೋತಿ ಎ. ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಮಹಿಳೆಯರ ಹಕ್ಕು ಮತ್ತು ಘನತೆಯ ಬದುಕಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಒಟ್ಟಾಗಿ ಆಗಸ್ಟ್‌ನಲ್ಲಿ ‘ಕೊಂದವರು ಯಾರು?’ ಎಂಬ ಆಂದೋಲನವನ್ನು ಆರಂಭಿಸಿದ್ದೇವೆಂದು ಹೇಳಿದರು.
“ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ, ಹತ್ಯೆಗಳು, ಅಸಹಜ ಸಾವುಗಳು ಮತ್ತು ಕಾಣೆಯಾದ ಯುವತಿಯರ ಕುರಿತು ಸತ್ಯ ಹೊರತರುವುದು ನಮ್ಮ ಹೋರಾಟದ ಮೂಲ ಉದ್ದೇಶ. ನ್ಯಾಯಕ್ಕಾಗಿ ದಶಕಗಳಿಂದ ಹೋರಾಡುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಹೊಣೆ,” ಎಂದು ಅವರು ತಿಳಿಸಿದರು.
ಸರ್ಕಾರ ಹೊರಡಿಸಿರುವ SIT ರಚನೆ ಆದೇಶವನ್ನು ಉಲ್ಲೇಖಿಸಿದ ಅವರು, “ವಿಚಾರಣೆ ಕೇವಲ ಸಾಮೂಹಿಕ ಹೆಣ ಹೂಳುವಿಕೆಗೆ ಸೀಮಿತವಾಗದೇ, ಆ ವ್ಯಾಪ್ತಿಯಲ್ಲಿ ದಾಖಲಾಗಿರುವ ಮತ್ತು ದಾಖಲಾಗುವ ಎಲ್ಲಾ ಅಪರಾಧ ಪ್ರಕರಣಗಳ ಸಂಪೂರ್ಣ ತನಿಖೆ ನಡೆಸಬೇಕು. ಇದನ್ನು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಚರ್ಚೆಗಳ ಕಡೆ ತಿರುಗಿಸುವ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ,” ಎಂದರು.
2012ರ ಡಿಸೆಂಬರ್ 16ರಂದು ನಡೆದ ದೆಹಲಿಯ ನಿರ್ಭಯಾ ಪ್ರಕರಣವನ್ನು ಸ್ಮರಿಸಿ, ದೇಶದಾದ್ಯಂತದಂತೆ ಇಲ್ಲಿ ಕೂಡ ಅತ್ಯಾಚಾರ ವಿರೋಧಿ ದಿನದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. “ಮಹಿಳೆಯರು ಬಲಿಪಶುಗಳಲ್ಲ; ತಮ್ಮ ಹಕ್ಕು ಮತ್ತು ಉಳಿವಿಗಾಗಿ ಹೋರಾಡಬಲ್ಲವರು ಎಂಬ ಸಂದೇಶ ನೀಡುವ ದಿನ ಇದು,” ಎಂದು ಜ್ಯೋತಿ ಎ. ಹೇಳಿದರು.
ಬೆಳಿಗ್ಗೆ 10.30: ಮಹಿಳೆಯರ ಮೌನ ಮೆರವಣಿಗೆ (ಮಾರಿಗುಡಿಯಿಂದ), ನಂತರ: ಬೆಳ್ತಂಗಡಿ ತಾಲ್ಲೂಕು ಕಚೇರಿ ಆವರಣದಲ್ಲಿ ಬೃಹತ್ ಮಹಿಳಾ ನ್ಯಾಯ ಸಮಾವೇಶ ನಡೆಯಲಿದೆ ಎಂದರು.
ಗೋಷ್ಟಿಯಲ್ಲಿ ಮುಖಂಡರಾದ ಪ್ರಸನ್ನ ರವಿ, ಗೀತಾ ಸುರತ್ಕಲ್, ಸಿಂಧೂ ದೇವಿ, ಕಿರಣ್ ಪ್ರಭ ಉಪಸ್ಥಿತರಿದ್ದರು.