ಇಂದಿನಿಂದ ಅಂಡರ್‌ 19 ಏಷ್ಯಾ ಕಪ್‌ ಏಕದಿನ ಪಂದ್ಯಾವಳಿ ಆರಂಭ

ದುಬೈ: ಅಂಡರ್‌ 19 ಏಷ್ಯಾ ಕಪ್‌ ಏಕದಿನ ಪಂದ್ಯಾವಳಿ ಇಂದಿನಿಂದ ದುಬೈನಲ್ಲಿ ಆರಂಭಗೊಳ್ಳಲಿದ್ದು, ಡಿ.21ರವರೆಗೆ ಮುಂದುವರಿಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತಕ್ಕೆ ಯುಎಇ ಎದುರಾಳಿಯಾಗಿದ್ದು, ಆಯುಷ್‌ ಮ್ಹಾತ್ರೆ ನಾಯಕತ್ವದಲ್ಲಿರುವ ಭಾರತೀಯ ತಂಡದಲ್ಲಿ 14 ವರ್ಷದ ಬಿಹಾರದ ಬ್ಯಾಟರ್‌, ಝೆನ್‌ ಝಿ ಸೆನ್‌ಸೇಶನ್‌ ವೈಭವ್‌ ಸೂರ್ಯವಂಶಿ ಮಿಂಚುವ ನಿರೀಕ್ಷೆಯಿದೆ.

ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ತಂಡಗಳನ್ನು ಎ ಮತ್ತು ಬಿ ಹೀಗೆ 2 ಗುಂಪುಗಳಲ್ಲಿ ತಲಾ 4ರಂತೆ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಮಲೇಷ್ಯಾ, ಪಾಕಿಸ್ತಾನ ಮತ್ತು ಯುಎಇ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶೀಲಂಕಾ ತಂಡಗಳಿವೆ.

ಫೈನಲ್‌ ಸೇರಿ ಒಟ್ಟು 15 ಪಂದ್ಯಗಳು ನಡೆಯಲಿದ್ದು, ಪ್ರತೀ ತಂಡಗಳಿಗೆ ಲೀಗ್‌ ಹಂತದಲ್ಲಿ 3 ಪಂದ್ಯಗಳು ನಡೆಯುತ್ತವೆ. ಪ್ರತೀ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಡಿ.17ರವರೆಗೆ ಲೀಗ್‌ ಪಂದ್ಯಗಳು ನಡೆದರೆ, ಡಿ.19ಕ್ಕೆ ಸೆಮಿಫೈನಲ್‌, ಡಿ.21ಕ್ಕೆ ಫೈನಲ್‌ ಸಾಗಲಿದೆ. ಎಲ್ಲಾ ಪಂದ್ಯಗಳು ದುಬೈ ತಾಣದಲ್ಲೇ ನಡೆಯಲಿದ್ದು, ಲೀಗ್‌ ಮತ್ತು ಸೆಮಿಯಲ್ಲಿ ದಿನಕ್ಕೆ 2 ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 10.30ಕ್ಕೆ ಆರಂಭಗೊಳ್ಳಲಿವೆ.

ಪಂದ್ಯಾವಳಿಯಲ್ಲಿ ಬದ್ಧ ಎದುರಾಳಿ ತಂಡಗಳಾದ ಭಾರತ ಪಾಕ್‌ ತಂಡಗಳು ಡಿ.14ರ ಭಾನುವಾರ ಮುಖಾಮುಖಿಯಾಗಲಿವೆ.

error: Content is protected !!