
ಮಂಗಳೂರು: ಲಕ್ಕಿ ಸ್ಕೀಂಗಳ ಗ್ರಹಗತಿಯೇ ಚೆನ್ನಾಗಿಲ್ಲ ಎಂದೆನಿಸುತ್ತಿದೆ. ಆರಂಭದಲ್ಲಿ ಚೆನ್ನಾಗಿ ಸಾಗುತ್ತಿದ್ದ ಲಕ್ಕಿ ಸ್ಕೀಂಗಳು ಬರಬರುತ್ತಾ ಗ್ರಾಹಕರಿಗೆ ಟೋಪಿ ಹಾಕುವುದಲ್ಲದೆ, ಹೇಳ ಹೆಸರಿಲ್ಲದೆ ಬಾಗಿಲು ಬಂದ್ ಮಾಡುತ್ತಿದೆ. ಲಕ್ಕಿ ಸ್ಕೀಂ ನಡೆಸುವ ಓನರ್‌ಗಳು ಗ್ರಾಹಕರಿಗೆ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗುವ ಸುದ್ದಿಗಳು ಆಗಾಗ ಕೇಳಿ ಬರುತ್ತಿದೆ. ಈಗಾಗಲೇ ಬಿಎಂಆರ್ ಸೇರಿ ಹಲವು ಲಕ್ಕಿ ಸ್ಕೀಂಗಳು ಮುಳುಗಡೆಯಾಗಿದ್ದು, ಇದೀಗ ಅದರ ಪಟ್ಟಿಗೆ ದೊಡ್ಡದೊಂದು ಲಕ್ಕಿ ಸ್ಕೀಂ ಸೇರಿಕೊಂಡಿದ್ದಾಗಿ ಸುದ್ದಿಗಳು ಬರಲಾರಂಭಿಸಿದೆ.
ಹೌದು ಡ್ರೀಂ ಡೀಲ್ ಎನ್ನುವ ಲಕ್ಕಿ ಸ್ಕೀಂ ಚೆನ್ನಾಗಿ ನಡೆಯುತ್ತಿದೆ ಎಂದೆನಿಸಿದರೂ ಇದುವರೆಗೆ ಬಂಪರ್ ಲಕ್ಕಿಡ್ರಾದಲ್ಲಿ ಸಿಕ್ಕ ಮನೆಗಳು ಗ್ರಾಹಕರ ಕೈ ಸೇರಿಲ್ಲ ಎನ್ನುವ ಸುದ್ದಿ ಗ್ರಾಹಕರಿಂದಲೇ ಬಹಿರಂಗವಾಗುತ್ತಿದ್ದು ಈಗಾಗಲೇ ಕೆಲವರು ಕಾನೂನಿನ ನೆರವು ಪಡೆಯಲು ಮುಂದಾಗಿರುವ ಸುದ್ದಿಯೂ ಇದೆ. ಡ್ರೀಂ ಡೀಲ್ ನಲ್ಲಿ ಸ್ವಂತ ಮನೆಯ ಸ್ವೀಟ್ ಡ್ರೀಂ ಕಾಣುತ್ತಿದ್ದ ಗ್ರಾಹಕರು ದಿಗಿಲುಗೊಂಡಿದ್ದಾರೆ.

ಡ್ರೀಂ ಡೀಲ್‌ನ ಮೊದಲ ಸೀಸನ್ ಮುಗಿದು ಆರು ತಿಂಗಳಾಗಿದೆ. ಇದೀಗ ಮತ್ತೊಂದು ಸೀಸನ್ ಮುಕ್ತಾಯದ ಹಂತದಲ್ಲಿದ್ದು, ಈಗಾಗಲೇ ನಾಲ್ಕು ಕಂತು ಮುಗಿದಿದೆ. ವಿಶೇಷವೆಂದರೆ ಮೊದಲ ಕಂತಿನ ನಾಲ್ಕು ಬಂಪರ್ ಪ್ರೈಸ್ ಗ್ರಾಹಕರ ಕೈ ಸೇರಿಲ್ಲ ಎನ್ನಲಾಗಿದ್ದು, ಇನ್ನೊಂದು ಸೀಸನ್‌ನ ಐದು ಬಂಪರ್ ಪ್ರೈಸ್‌ಗಳು ಇನ್ನೂ ಕೈ ಸೇರಿಲ್ಲ ಎಂಬ ಸುದ್ದಿಯೊಂದು ಹರಿದಾಡಲಾರಂಭಿಸಿದೆ.
ಮೊದಲ ಸೀಸನ್‌ನಲ್ಲಿ ನಾಲ್ಕು ಮಂದಿ ಲಕ್ಕಿ ಡ್ರಾದಲ್ಲಿ ಬಂಪರ್ ಬಹುಮಾನವಾಗಿ ಫುಲ್ ಫರ್ನಿಷ್ ಡ್ ಡಬಲ್ ಬೆಡ್‌ರೂಂ ಗೆದ್ದುಕೊಂಡಿದ್ದರು. ಆದರೆ ಅಸಲಿಗೆ ಇವರಿಗೆ ಮನೆಯೇ ಸಿಕ್ಕಿಲ್ಲ. ಇದಾದ ಮೇಲೆ ಮತ್ತೊಂದು ಸೀಸನ್‌ನಲ್ಲಿ ಐದು ಮಂದಿ ಬಂಪರ್ ಲಕ್ಕಿ ಡ್ರಾದಲ್ಲಿ ಡಬಲ್ ಬೆಡ್ ರೂಂ ಮನೆ ಗೆದ್ದುಕೊಂಡಿದ್ದರೂ ಇದುವರೆಗೂ ಅವರಿಗೆ ಮನೆ ಸಿಕ್ಕಿಲ್ಲ. ಒಟ್ಟು 9 ಮನೆಗಳನ್ನು ಗ್ರಾಹಕರಿಗೆ ಕೊಡದೆ ಲಕ್ಕಿಸ್ಕೀಂ ನಡೆಸುವ ಡ್ರೀಂ ಡೀಲ್‌ನ ವಿಶ್ವಾಸಾರ್ಹತೆಯ ಬಗ್ಗೆ ಗ್ರಾಹಕರಿಗೆ ಸಂಶಯ ಉಂಟಾಗಿದ್ದು, ನಮಗೆ ಮನೆ ಯಾವಾಗ ಸಿಗುತ್ತದೆ ಎಂದು ಓನರ್‌ಗಳನ್ನು ಕೇಳುತ್ತಲೇ ಬರುತ್ತಿದ್ದಾರೆ. ಇದಕ್ಕಾಗಿ
ಕಸ್ಟಮರ್ ಜೊತೆ ಬಾಂಡ್ ಮಾಡಿರುವ ಸುದ್ದಿಯೂ ಗ್ರಾಹಕ ವಲಯದಲ್ಲಿದೆ. ನವೆಂಬರ್ ನಲ್ಲಿ ಮನೆ ನೀಡುವುದಾಗಿ ಹೇಳಿದ್ದರೂ ಇನ್ನೂ ಆ ಬಗ್ಗೆ ಮಾತಾಡದೆ ಮೀಟಿಂಗ್ ಬನ್ನಿ ಮಾತಾಡೋಣ, ಮುಡಾ ಸಮಸ್ಯೆಯಿಂದ ವಿಳಂಬವಾಗಿದೆ ಎಂದೆಲ್ಲ ಹೇಳಿ ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಗ್ರಾಹಕರು ಹೇಳಿಕೊಂಡಿದ್ದಾರೆ.
ಡ್ರೀಂ ಡೀಲ್ ಲಕ್ಕಿ ಸ್ಕೀಂಗೆ ಸಾವಿರಾರು ಮಂದಿ ಗ್ರಾಹಕರಿದ್ದಾರೆ. ಇದರ ಜಾಹೀರಾತುಗಳು ಸರ್ಕಾರಿ ಬಸ್‌ಗಳ ಮೇಲೂ ಬಂದಿದೆ. ಬಿಗ್ ಬಾಸ್, ಮಹಾನಟಿ ಮತ್ತಿತರ ರಿಯಾಲಿಟಿ ಶೋ ಕೂಡಾ ಪ್ರಾಯೋಜಿಸುತ್ತಿದೆ. ಹೀಗಾಗಿ ಇದಕ್ಕೆ ಜನರು ಕಣ್ಣು ಮುಚ್ಚಿ ಸೇರಿದ್ದಾರೆ. ಆದರೆ ಇಂದು ಗ್ರಾಹಕರಿಗೆ ಮಾತು ತಪ್ಪಿ ಗೋಲ್ ಮಾಲ್ ನಡೆಸುವ ಹಂತಕ್ಕೆ ಬಂದಿದ್ದು, ಇದೂ ಕೂಡಾ ಇತರ ಸ್ಕೀಂ ಗಳಂತೆ ಬಾಗಿಲು ಹಾಕಲಿದೆಯಾ ಎಂಬ ಅನುಮಾನ ಕಾಡಿದೆ. ಗ್ರಾಹಕರಿಗೆ ಬಹುಮಾನ ಕೊಡದೆ ಸ್ಕೀಂ ನಡೆಸುವ ಡ್ರೀಂ ಡೀಲ್ ಅದ್ಯಾವ ಡೀಲ್ ಮಾಡಲು ಹೊರಟಿದೆ ಎಂದು ಗ್ರಾಹಕರು ಆತಂಕಕ್ಕೀಡಾಗಿದ್ದಾರೆ.