ಆರೆಸ್ಸೆಸ್‌ ನೂತನ ಪ್ರಧಾನ ಕಚೇರಿಯನ್ನು ಪಂಚತಾರಾ ಹೋಟೆಲ್‌ಗೆ ಹೋಲಿಸಿದ ಪ್ರಿಯಾಂಕ್‌ ಖರ್ಗೆ!

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂಘಕ್ಕೆ ಬರುತ್ತಿರುವ ದೇಣಿಗೆ ಮತ್ತು ನೋಂದಾಯಿಸದ ಸಂಸ್ಥೆಯಾಗಿಯೇ ಉಳಿದಿರುವುದರ ಬಗ್ಗೆ ಮತ್ತೊಮ್ಮೆ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿರುವ ಆರ್‌ಎಸ್‌ಎಸ್‌ನ ನೂತನ ಪ್ರಧಾನ ಕಚೇರಿ ʻಕೇಶವ್ ಕುಂಜ್’ ಬಹುಮಹಡಿ ಕಟ್ಟಡ ಸಂಕೀರ್ಣದ ಚಿತ್ರವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಐಷಾರಾಮಿ ಹೋಟೆಲ್‌ನಂತೆ ಕಾಣುತ್ತಿದೆ ಎಂದಿದ್ದಾರೆ.

ʻಮೊದಲ ನೋಟದಲ್ಲಿ, ಈ ಕಟ್ಟಡವನ್ನು ಐಷಾರಾಮಿ ಹೋಟೆಲ್ ಅಥವಾ ಅಪಾರ್ಟ್‌ಮೆಂಟ್ ಸಂಕೀರ್ಣ ಎಂದು ನೀವು ತಪ್ಪಾಗಿ ಭಾವಿಸಬಹುದು. ಆದರೆ ಇದು ಏನೆಂದು ಊಹಿಸಿ?
ಇದು ದೆಹಲಿಯಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿ ‘ಕೇಶವ್ ಕುಂಜ್’. ಇದನ್ನು ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ, ಇದಕ್ಕೆ ₹5 ರಿಂದ ಲಕ್ಷದ ವರೆಗೆ ‘ಗುರು ದಕ್ಷಿಣೆ‘ ಮೂಲಕ ಹಣವನ್ನು ಸಂಗ್ರಹಿಸಲಾಗಿದೆʼ

Image

ʻನೋಂದಣಿಯಾಗದ ಎನ್‌ಜಿಒ ಆಗಿರುವ ಆರ್‌ಎಸ್‌ಎಸ್, ಭಗವಾಧ್ವಜ ಹೆಸರಿನಲ್ಲಿ ಗುರುದಕ್ಷಿಣೆಯ ರೂಪದಲ್ಲಿ ತನ್ನ ಸ್ವಯಂಸೇವಕರಿಂದ ಹಣವನ್ನು ಸಂಗ್ರಹಿಸುತ್ತದೆ. ಅಂದರೆ ದಕ್ಷಿಣೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಬಹುದು ಮತ್ತು ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳಬಹುದು. ಹೀಗೆ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ರಾಷ್ಟ್ರವಿರೋಧಿಯಲ್ಲವೇ?ʼ ಎಂದು ಅವರು ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಆರ್‌ಎಸ್‌ಎಸ್‌ ಆದಾಯ ತೆರಿಗೆ ತಪ್ಪಿಸಿಕೊಳ್ಳುತ್ತಿರುವುದು ಏಕೆ’ ಎಂದು ಈ ಹಿಂದೆ ಪ್ರಿಯಾಂಕ್‌ ಪ್ರಶ್ನಿಸಿದ್ದರು. ತಾನು ನೋಂದಾಯಿತ ಸಂಸ್ಥೆಯಲ್ಲ ಎಂದು ಆರ್‌ಎಸ್‌ಎಸ್‌ ಲಿಖಿತವಾಗಿ ತಿಳಿಸಿದೆ. ಆರ್‌ಎಸ್‌ಎಸ್‌ ನಿಸ್ವಾರ್ಥದಿಂದ ದೇಶಸೇವೆ ಮಾಡುತ್ತಿರುವುದು ನಿಜವೇ ಆಗಿದ್ದರೆ, ಇತರ ಎಲ್ಲ ಎನ್‌ಜಿಒಗಳಂತೆ ಪಾರದರ್ಶಕವಾಗಿ ಹಾಗೂ ಕಾನೂನುಬದ್ಧವಾಗಿ ಏಕೆ ನೋಂದಾಯಿಸಿಕೊಳ್ಳಬಾರದು ಎಂದು ಕೇಳಿದ್ದರು.

‘ಆರ್‌ಎಸ್‌ಎಸ್‌ಗೆ ದೇಣಿಗೆ ನೀಡುವವರು ಯಾರು? ದೇಣಿಗೆ ಎಲ್ಲಿಂದ ಬರುತ್ತದೆ? ನೋಂದಣಿ ಇಲ್ಲದ ಸಂಘಟನೆ ಎಂದ ಮೇಲೆ ಲೆಕ್ಕಪತ್ರ ಪರಿಶೀಲನೆ ಮತ್ತು ತೆರಿಗೆ ಪಾವತಿಯ ಪ್ರಶ್ನೆಯೇ ಇರುವುದಿಲ್ಲ. ಹೀಗೆ ದೇಶಸೇವೆ ಎಂದು ಹೇಳುತ್ತಾ ಪರಿಶೀಲನೆ ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿರುವುದು ಏಕೆ? ಹೀಗೆ ತೆರಿಗೆ ತಪ್ಪಿಸುವವರು ದೇಶಭಕ್ತರು ಹೇಗಾಗುತ್ತಾರೆ’ ಎಂದೂ ಅವರು ಪ್ರಶ್ನಿಸಿದ್ದರು.

error: Content is protected !!