ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿದ್ದು, ಏಕಪರದೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಹುತೇಕ ಕಡೆಗಳಲ್ಲಿ ಮುಂಜಾನೆ 6.30ಕ್ಕೆ ಶೋ ಆಯೋಜನೆ ಮಾಡಲಾಗಿತ್ತು. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ನಟ ಧನ್ವೀರ್, ರಚಿತಾ ರೈ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್ ಜೊತೆ ಸಿನಿಮಾ ನೋಡುತ್ತಿದ್ದಾರೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಇತ್ತ ಅವರ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದ್ದು, ಮಾಸ್ ಡೈಲಾಗ್, ಟ್ವಿಸ್ಟ್ಗಳನ್ನು ಒಳಗೊಂಡ ಕಥೆಗಳ ಮೂಲಕ ಫ್ಯಾನ್ಸ್ಗೆ ಮಿಲನ ಪ್ರಕಾಶ್ ಖುಷಿ ನೀಡಿದ್ದಾರೆ. ‘ದಿ ಡೆವಿಲ್’ ಸಿನಿಮಾ ರಿಲೀಸ್‌ಗೂ ಮುನ್ನವೇ ಅಂದಾಜು 3.5 ಕೋಟಿ ರೂಪಾಯಿಗೂ ಅಧಿಕವಾಗಿ ಸಂಗ್ರಹಣೆ ಮಾಡಿದೆ.

ಸದ್ಯ ಗಂಟೆಗೆ 11 ಸಾವಿರ ಟಿಕೆಟ್ ಬುಕಿಂಗ್ ಆಗಿದ್ದು, 55,000ಕ್ಕೂ ಅಧಿಕ ಫ್ಯಾನ್ಸ್ ಶೋಗಳ ಟಿಕೆಟ್ ಸೇಲ್ ಆಗಿತ್ತು ಎನ್ನಲಾಗಿದೆ. ಅಭಿಮಾನಿಗಳು ದರ್ಶನ್ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಛಲಕ್ಕೆ ಬಿದ್ದಿದ್ದಾರೆ. ಇವರ ಅಭಿಮಾನಿಗಳಿಂದಾಗಿ ಫಸ್ಟ್ ಡೇ ಫಸ್ಟ್ ಶೋ ಹೌಸ್‌ಫುಲ್ ಆಗಿದೆ. ಹೀಗಾಗಿ ಶೋಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಕೆಲವು ಮಲ್ಟಿಫ್ಲೆಕ್ಟ್‌ನಲ್ಲಿ ಒಂದೇ ದಿನ 30 ಶೋಗಳು ಬುಕ್ ಆಗಿವೆ. ಅಂದಹಾಗೆ ಟಿಕೆಟ್ ದರ ಕೂಡ ಏರಿಕೆಯಾಗಿದೆ, ಗರಿಷ್ಠ ಟಿಕೆಟ್ ದರ 900 ರೂಪಾಯಿವರೆಗೆ ಏರಿಕೆಯಾಗಿದೆ. ಬಹುತೇಕ ಕಡೆ 500 ರೂಪಾಯಿಯಿಂದ 600 ರೂಪಾಯಿವರೆಗೂ ಟಿಕೆಟ್ ದರವಿದೆ.
